ತುಮಕೂರು: ತರಕಾರಿ, ಧಾನ್ಯ, ಅಕ್ಕಿ, ಬೇಳೆ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದರೆ, ಹಣ್ಣುಗಳ ದರ ಕೊಂಚ ಕಡಿಮೆಯಾಗಿದೆ. ಕೋಳಿ ಮಾಂಸದ ಬೆಲೆ ಎರಡು ವಾರದಿಂದ ಗಗನ ಮುಖಿಯಾಗಿದೆ.
ಟೊಮೆಟೊ ದರ ಏರಿಕೆ:
ಕಣ್ಣಾ ಮುಚ್ಚಾಲೆ ಆಡುತ್ತಿರುವ ಟೊಮೆಟೊ ದರ ಈ ವಾರ ಮತ್ತೆ ಏರಿಕೆಯತ್ತ ಸಾಗಿದೆ. ಎರಡು ವಾರದಿಂದ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹25–30ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹40–50ಕ್ಕೆ ಮಾರಾಟವಾಗುತ್ತಿದೆ. ಹಿಂದಿನ ಎರಡು ವಾರದಿಂದ ಇಳಿಕೆಯತ್ತ ಸಾಗಿರುವ ಈರುಳ್ಳಿ ಬೆಲೆ ಕೆ.ಜಿ ₹30–35ಕ್ಕೆ ತಗ್ಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ. ಬೆಳ್ಳುಳ್ಳಿ ಕೆ.ಜಿ ₹180–200ಕ್ಕೆ ಹೆಚ್ಚಳವಾಗಿದೆ.
ತರಕಾರಿ:
ಬೀಟ್ರೂಟ್, ಆಲೂಗಡ್ಡೆ, ತೊಂಡೆಕಾಯಿ, ಕಾಪ್ಸಿಕಂ ಧಾರಣೆ ಏರಿಕೆಯಾಗಿದ್ದರೆ; ಹಾಗಲಕಾಯಿ, ಮೂಲಂಗಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ತರಕಾರಿಗಳ ಆವಕ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಳವಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಅವರೆಕಾಯಿ ಮಾರುಕಟ್ಟೆಗೆ ಕಾಲಿಟ್ಟಿದ್ದು, ಬೆಲೆ ದುಬಾರಿಯಾಗಿಯೇ ಇದೆ. ನಾಟಿ ಕಾಯಿ ಕೆ.ಜಿ ₹50–60, ಹುಣಸೂರು ಕಾಯಿ ಕೆ.ಜಿ ₹40–50ಕ್ಕೆ ಸಿಗುತ್ತಿದೆ.
ಮೆಂತ್ಯ ಸೊಪ್ಪು ಅಗ್ಗ:
ಮೆಂತ್ಯ ಸೊಪ್ಪು ದರ ಒಂದೇ ವಾರದಲ್ಲಿ ಅರ್ಧದಷ್ಟು ಕಡಿಮೆಯಾಗಿದ್ದು, ಕೆ.ಜಿಗೆ 30 ಕಡಿಮೆಯಾಗಿದೆ. ಉಳಿದ ಸೊಪ್ಪಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹20–30, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.
ದಾಳಿಂಬೆ, ಪೈನಾಪಲ್ ಅಗ್ಗ:
ಗಗನ ಮುಖಿಯಾಗಿದ್ದ ದಾಳಿಂಬೆ ಹಣ್ಣಿನ ಧಾರಣೆ ಎರಡು ವಾರದಿಂದ ಇಳಿಕೆಯತ್ತ ಮುಖ ಮಾಡಿದ್ದು, ಈ ವಾರ ಕೆ.ಜಿ ₹180ಕ್ಕೆ ಬಂದು ನಿಂತಿದೆ. ಹಿಂದಿನ ಕೆಲ ವಾರಗಳಲ್ಲಿ ಕೆ.ಜಿ ₹250ರ ವರೆಗೂ ಹೆಚ್ಚಳವಾಗಿತ್ತು. ಕೆಲ ದಿನಗಳಿಂದ ಪೈನಾಪಲ್ ದರ ಸಹ ಕಡಿಮೆಯಾಗುತ್ತಾ ಸಾಗಿದ್ದು, ಕೆ.ಜಿ ₹40ಕ್ಕೆ ಇಳಿಕೆ ಕಂಡಿದೆ. ಸೀತಾಫಲ ಕೆ.ಜಿ ₹150 ಇದೆ. ಉಳಿದ ಹಣ್ಣುಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.
ಅಡುಗೆ ಎಣ್ಣೆ:
ಪಾಮಾಯಿಲ್ ಬೆಲೆಯಲ್ಲಿ ಅಲ್ಪ ಕಡಿಮೆಯಾಗಿರುವುದನ್ನು ಹೊರತುಪಡಿಸಿದರೆ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹107–110, ಪಾಮಾಯಿಲ್ ಕೆ.ಜಿ ₹83–85, ಕಡಲೆಕಾಯಿ ಎಣ್ಣೆ ಕೆ.ಜಿ ₹152–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಧಾನ್ಯ– ಬೇಳೆ: ಬೇಳೆ ಕಾಳುಗಳು, ಧಾನ್ಯಗಳ ಧಾರಣೆ ಅಲ್ಪ ಮಟ್ಟದಲ್ಲಿ ಹೆಚ್ಚಳವಾಗಿದೆ. ತೊಗರಿ ಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಗೋಧಿ ಕೊಂಚ ಏರಿಕೆಯಾಗಿದ್ದರೆ, ಅವರೆಕಾಳು, ಬಟಾಣಿ, ಕಡಲೆ ಬೀಜ, ಸಕ್ಕರೆ ಅಲ್ಪ ಮಟ್ಟದಲ್ಲಿ ಇಳಿಕೆ ದಾಖಲಿಸಿದೆ.
ಮಸಾಲೆ ಪದಾರ್ಥ:
ಮಸಾಲೆ ಪದಾರ್ಥಗಳಲ್ಲಿ ಜೀರಿಗೆ, ಮೆಂತ್ಯ, ಲವಂಗ, ಗಸಗಸೆ, ಬಾದಾಮಿ, ದ್ರಾಕ್ಷಿ ದರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಕ್ಕಿ ಬೆಲೆ ಪ್ರತಿ ವಾರವೂ ಏರಿಕೆಯತ್ತಲೇ ಮುಖ ಮಾಡಿದೆ.
ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹500–550, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–240, ಹುಣಸೆಹಣ್ಣು ₹80–200, ಕಾಳುಮೆಣಸು ಕೆ.ಜಿ ₹650–670, ಜೀರಿಗೆ ಕೆ.ಜಿ ₹520–550, ಸಾಸಿವೆ ಕೆ.ಜಿ ₹85–90, ಮೆಂತ್ಯ ಕೆ.ಜಿ ₹95–100, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹900–1,000, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,400, ಬಾದಾಮಿ ಕೆ.ಜಿ ₹580–600, ಗೋಡಂಬಿ ಕೆ.ಜಿ ₹600–650, ದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಗಗನಮುಖಿ:
ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಕೋಳಿ ಮಾಂಸದ ಬೆಲೆ ಗಗನ ಮುಖಿಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್‌ಲೆಸ್ ಕೆ.ಜಿ ₹200, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹115ಕ್ಕೆ ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.