ಕೆ.ಜೆ. ಮರಿಯಪ್ಪ
ಲೀಡ್... ಬಾಕ್ಸ್... 2 ಪಟ್ಟಿ ಇದೆ...
ತುಮಕೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ನಿರ್ದೇಶಕರ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಸೋಮವಾರ ಮುಕ್ತಾಯ ಕಂಡಿದ್ದು, ಎಲ್ಲೆಡೆ ನೇರ ಹಣಾಹಣಿ ಏರ್ಪಟ್ಟಿದೆ.
ಕೊರಟಗೆರೆ ತಾಲ್ಲೂಕಿನಲ್ಲಿ ಮೂವರು ಸ್ಪರ್ಧೆಯಲ್ಲಿದ್ದರೆ ಉಳಿದ ತಾಲ್ಲೂಕಿನಲ್ಲಿ ನೇರ ಸ್ಪರ್ಧೆ ಕಂಡು ಬಂದಿದೆ. 21 ಮಂದಿ ಅಂತಿಮ ಕಣದಲ್ಲಿ ಉಳಿದಿದ್ದು, ನ. 10ರಂದು ಮತದಾನ ನಡೆಯಲಿದೆ.
ಗುಬ್ಬಿ ಪ್ರತಿಷ್ಠೆ: ಗುಬ್ಬಿ ತಾಲ್ಲೂಕಿನಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ತಮ್ಮ ಪತ್ನಿ ಕೆ.ಪಿ.ಭಾರತಿದೇವಿ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ. ತಮ್ಮ ಜತೆಯಲ್ಲೇ ಇದ್ದು, ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಜತೆಗೆ ಗುರುತಿಸಿಕೊಂಡು, ತಮ್ಮ ವಿರುದ್ಧವೇ ಪ್ರಚಾರ ಮಾಡಿದ ಮಾಜಿ ನಿರ್ದೇಶ ಜಿ.ಚಂದ್ರಶೇಖರ್ ಅವರನ್ನು ಎದುರಿಸಬೇಕಾಗಿದೆ.
ಚಂದ್ರಶೇಖರ್ ಅವರನ್ನು ಮಣಿಸಲು ಶ್ರೀನಿವಾಸ್ ಈಗಾಗಲೇ ಪ್ರಯತ್ನ ಆರಂಭಿಸಿದ್ದು, ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಆದರೆ ಚಂದ್ರಶೇಖರ್ ಅವರಿಗೆ ಬಿಜೆಪಿ, ಜೆಡಿಎಸ್ ಬಲ ತುಂಬಿದೆ.
ತುಮಕೂರು ಸವಾಲು: ತುಮಕೂರು ತಾಲ್ಲೂಕಿನಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ನಿರ್ದೇಶಕ ಎಚ್.ಕೆ.ರೇಣುಕಾಪ್ರಸಾದ್ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಎಚ್.ಎ.ನಂಜೇಗೌಡ ಕಣಕ್ಕೆ ಇಳಿದಿದ್ದಾರೆ. ರೇಣುಕಾಪ್ರಸಾದ್ ಬೆಂಬಲಕ್ಕೆ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ನಿಂತಿದ್ದು, ಗೆಲ್ಲಿಸಿಕೊಳ್ಳುವುದು ಪ್ರತಿಷ್ಠೆಯಾಗಿದೆ. ಲೋಕಸಭೆ ಚುನಾವಣೆ ನಂತರ ಗೌಡರಿಗೆ ಎದುರಾಗಿರುವ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟಿದ್ದಾರೆ.
ಮಧುಗಿರಿ ಅನಿವಾರ್ಯ: ಪಕ್ಷಾಂತರ ಮಾಡಿದ ಮಾಜಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಹಕಾರ ಸಚಿವ ಕೆ.ಎನ್.ರಾಜಣ್ಣ ತೊಡೆತಟ್ಟಿ ನಿಂತಿದ್ದಾರೆ. ಬಿ.ನಾಗೇಶ್‌ಬಾಬು ಪರವಾಗಿ ಈಗಾಗಲೇ ವೇದಿಕೆ ಸಿದ್ಧಪಡಿಸಿದ್ದಾರೆ. ಕಳೆದ ಬಾರಿ ಚಂದ್ರಶೇಖರ್‌ಗೆ ರಾಜಣ್ಣ ಬೆಂಬಲವಿತ್ತು. ಈ ಬಾರಿ ಜೆಡಿಎಸ್, ಬಿಜೆಪಿ ಬೆಂಬಲದೊಂದಿಗೆ ಹೋರಾಡಬೇಕಿದೆ. ಆದರೆ ಇತರೆ ತಾಲ್ಲೂಕಿಗಿಂತ ತಮ್ಮ ತವರು ಕ್ಷೇತ್ರದ ಗೆಲುವು ರಾಜಣ್ಣ ಅವರಿಗೆ ಪ್ರತಿಷ್ಠೆಯಾಗಿದ್ದು, ಚಂದ್ರಶೇಖರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತುರುವೇಕೆರೆ ಸೆಣಸಾಟ: ತುಮುಲ್ ಮಾಜಿ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹಾಗೂ ಪಿ.ಟಿ.ಗಂಗಾಧರಯ್ಯ ನಡುವೆ ನೇರ ಹಣಾಹಣಿ. ಕಳೆದ ಬಾರಿಯ ಚುನಾವಣೆಯಲ್ಲಿ ಮಹಲಿಂಗಯ್ಯ ಬೆಂಬಲಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ನಿಂತಿದ್ದರು. ಚುನಾವಣೆಯಲ್ಲಿ ತಮ್ಮ ವಿರುದ್ಧ ಪ್ರಚಾರ ಮಾಡಿದ ಕಾರಣಕ್ಕೆ ಈ ಬಾರಿ ವಿರೋಧ ಎದುರಿಸಬೇಕಾಗಿದೆ. ತುಮುಲ್ ನೇಮಕಾತಿ ಹಗರಣ ಸೇರಿದಂತೆ ಇತರೆ ವಿಚಾರಗಳನ್ನು ಮುಂದಿಟ್ಟುಕೊಂಡು ಈಗಾಗಲೇ ಮಹಲಿಂಗಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಏಕಾಂಗಿಯಾಗಿ ಹೋರಾಟ ನಡೆಸಬೇಕಿದೆ. ಗಂಗಾಧರಯ್ಯ ಪರವಾಗಿ ಕೃಷ್ಣಪ್ಪ ನಿಂತಿದ್ದಾರೆ.
ಚಿಕ್ಕನಾಯಕನಹಳ್ಳಿ ಕುತೂಹಲ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎನ್.ಶಿವಪ್ರಕಾಶ್ ಹಾಗೂ ಎಸ್.ರಾಜಶೇಖರ್ ಸ್ಪರ್ಧೆ ಕುತೂಹಲ ಕೆರಳಿಸಿದೆ. ಈವರೆಗೆ ಸ್ಪರ್ಧೆ ಮಾಡಿಕೊಂಡು ಬಂದಿದ್ದ ಶಿವನಂಜಪ್ಪ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ರಾಜಶೇಖರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಿವಪ್ರಕಾಶ್ ಪರವಾಗಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ನಿಂತಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಸಾಧಿಸಿರುವ ಮಾಧುಸ್ವಾಮಿ ಈ ಹಿಂದೆ ಶಿವನಂಜಪ್ಪ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ರಾಜಶೇಖರ್‌ಗೆ ಬೆಂಬಲ ನೀಡುವಂತೆ ಮಧುಸ್ವಾಮಿ ಅವರನ್ನು ಶಿವನಂಜಪ್ಪ ಕೇಳಿಕೊಂಡಿದ್ದರು. ಅದಕ್ಕೆ ಅವರು ಒಪ್ಪಿಲ್ಲ. ಈಗ ಇಬ್ಬರಿಗೂ ತಮ್ಮವರನ್ನು ಗೆಲ್ಲಿಸಿಕೊಳ್ಳುವುದು ಅನಿವಾರ್ಯವಾಗಿದೆ. ಗುರುವಿನ ವಿರುದ್ಧ ಶಿವನಂಜಪ್ಪ ತೊಡೆ ತಟ್ಟಿದ್ದಾರೆ.
ತಿಪಟೂರು ಸ್ಪರ್ಧೆ ವೀರರು: ತಿಪಟೂರು ತಾಲ್ಲೂಕಿನಿಂದ ಮಾಜಿ ನಿರ್ದೇಶಕ ಎಂ.ಕೆ.ಪ್ರಕಾಶ್ 6ನೇ ಬಾರಿಗೆ ಹಾಗೂ ತ್ರಿಯಂಬಕ 5ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪ್ರಕಾಶ್ ಅವರನ್ನು ಕಾಂಗ್ರೆಸ್ ಬೆಂಬಲಿಸಿದ್ದರೆ, ತ್ರಿಯಂಬಕ ಅವರಿಗೆ ಬಿಜೆಪಿ, ಜೆಡಿಎಸ್ ಬೆಂಬಲವಿದೆ. ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಕುಣಿಗಲ್ ನಾಗಾಲೋಟ: ಕುಣಿಗಲ್ ತಾಲ್ಲೂಕಿನಲ್ಲಿ 1999ರಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿರುವ ಬಿಜೆಪಿಯ ಡಿ.ಕೃಷ್ಣಕುಮಾರ್ ನಾಗಾಲೋಟಕ್ಕೆ ತಡೆಯೊಡ್ಡಲು ಕೆ.ಎಂ.ಮಾಸ್ತಿಕರೀಗೌಡ ಮೂಲಕ ಕಾಂಗ್ರೆಸ್ ಸಜ್ಜಾಗಿ ನಿಂತಿದೆ. ಶಾಸಕ ಡಾ.ಎಚ್.ಡಿ.ರಂಗನಾಥ್ ಈ ಬಾರಿ ಶತಾಯಗತಾಯ ಅಧಿಕಾರ ಕಿತ್ತುಕೊಳ್ಳಲೇ ಬೇಕು ಎಂಬ ಹಟಕ್ಕೆ ಇಳಿದಿದ್ದಾರೆ. ಲೋಕಸಭೆ ಚುನಾವಣೆ ಸೋಲಿನ ಸೇಡನ್ನು ಡೇರಿ ಚುನಾವಣೆಯಲ್ಲಿ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಕೃಷ್ಣಕುಮಾರ್ ನಾಗಾಲೋಟ ಮುಂದುವರಿಯುವುದೆ? ಇಲ್ಲವೆ ಬದಲಾವಣೆಯ ಪ್ರಯತ್ನಕ್ಕೆ ಯಶಸ್ಸು ಸಿಗುವುದೆ? ಎಂಬ ಕುತೂಹಲ ಮೂಡಿದೆ.
ಕೊರಟಗೆರೆ ತ್ರಿಕೋನ: ಬಿಜೆಪಿ– ಜೆಡಿಎಸ್ ಬೆಂಬಲದೊಂದಿಗೆ ವಿ.ಸಿದ್ದಗಂಗಯ್ಯ ಕಣಕ್ಕೆ ಇಳಿದಿದ್ದಾರೆ. ಮಾಜಿ ನಿರ್ದೇಶಕ ಈಶ್ವರಯ್ಯ ಅವರು ಸಚಿವ ಜಿ.ಪರಮೇಶ್ವರ ಬೆಂಬಲ ನಂಬಿದ್ದಾರೆ. ಟಿ.ಎನ್.ಅರುಣ್‌ಕುಮಾರ್ ಸಹ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಜೆಡಿಎಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಈಶ್ವರಯ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸೇರಿದ್ದರು. ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸಾಕಷ್ಟು ಹಿನ್ನಡೆ ಕಂಡಿದ್ದು, ಈ ಚುನಾವಣೆ ಸಚಿವರಿಗೂ ಪ್ರತಿಷ್ಠೆಯಾಗಿದೆ.
ಶಿರಾ ಸ್ಪರ್ಧೆ: ಶಿರಾ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸಿ.ಆರ್.ಉಮೇಶ್ ಹಾಗೂ ಜೆಡಿಎಸ್– ಬಿಜೆಪಿ ಮೈತ್ರಿ ನೆರವಿನೊಂದಿಗೆ ಎಸ್.ಆರ್.ಗೌಡ ಕಣಕ್ಕಿಳಿದಿದ್ದಾರೆ. ಶಾಸಕ ಟಿ.ಬಿ.ಜಯಚಂದ್ರ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಎಸ್.ಆರ್.ಗೌಡ ಮೈತ್ರಿ ಬೆಂಬಲದೊಂದಿಗೆ ಗೆಲುವಿನ ಕನಸು ಕಾಣುತ್ತಿದ್ದಾರೆ.
ಪಾವಗಡ: ಪಾವಗಡ ತಾಲ್ಲೂಕಿನಲ್ಲಿ ಚನ್ನಮಲ್ಲಯ್ಯ (ಜೆಡಿಎಸ್ ಬೆಂಬಲ) ಹಾಗೂ ಚಂದ್ರಶೇಖರರೆಡ್ಡಿ (ಕಾಂಗ್ರೆಸ್ ಬೆಂಬಲ) ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.