ಪಾವಗಡ: ತುಂಗಭದ್ರಾ ಕುಡಿಯುವ ನೀರನ್ನು ಪಟ್ಟಣದ ವಿವಿಧ ಬಡಾವಣೆಗಳ ಮನೆಗಳಿಗೆ ಸರಬರಾಜು ಮಾಡಲು ಪುರಸಭೆ ಈವರೆಗೆ ಸಿದ್ಧತೆ ನಡೆಸದಿರುವ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್, ಸಂಗ್ರಹಣಾ ತೊಟ್ಟಿ, ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಮುಕ್ತಾಯವಾಗಿದ್ದು, ಕಳೆದ ವಾರ ಪ್ರಾಯೋಗಿಕವಾಗಿ ನೀರು ಹರಿಸಿ ಪರಿಶೀಲನೆ ನಡೆಸಲಾಗಿದೆ.
ಪಟ್ಟಣಕ್ಕೆ ನಿತ್ಯ ಎರಡು ಲಕ್ಷ ಲೀಟರ್ ನೀರನ್ನು ತುಂಗಭದ್ರಾ ಕುಡಿಯುವ ನೀರಿನ ಯೋಜನೆಯಲ್ಲಿ ಮೀಸಲಿರಿಸಲಾಗಿದೆ. ಆದರೆ ಈವರೆಗೆ ನೀರನ್ನು ಸಂಗ್ರಹಿಸಿ, ಪಟ್ಟಣದ ವಿವಿಧ ಪ್ರದೇಶಕ್ಕೆ ಸರಬರಾಜು ಮಾಡಲು ಕಾಮಗಾರಿ ಆರಂಭಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಕೆಲವೇ ದಿನಗಳಲ್ಲಿ ತುಂಗಭದ್ರಾ ನದಿಯಿಂದ ಶುದ್ಧೀಕರಿಸಿದ ನೀರು ತಾಲ್ಲೂಕಿಗೆ ನಿರಂತರವಾಗಿ ಸರಬರಾಜಾಗಲಿದೆ. ಹರಾಜು ಪ್ರಕ್ರಿಯೆ, ಕಾಮಗಾರಿ ಮುಗಿಯುವವರೆಗೆ ಪಟ್ಟಣದ ಜನತೆ ಕುಡಿಯುವ ನೀರಿನ ಯೋಜನೆಯಿಂದ ವಂಚಿತ ರಾಗಲಿದ್ದಾರೆ.
ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, ಏಳು ಸಾವಿರ ಮನೆಗಳಿವೆ. 40 ಸಾವಿರ ಜನಸಂಖ್ಯೆ ಇದೆ. ಸದ್ಯ ನೀರಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ಕೊಳವೆ ಬಾವಿಗಳಿಂದ ಸಂಗ್ರಹಣಾ ತೊಟ್ಟಿಗಳಲ್ಲಿ ನೀರು ಸಂಗ್ರಹಿಸಿ ಅಲ್ಲಿಂದ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಬೇಸಿಗೆಯಲ್ಲಿ ಕೊಳವೆ ಬಾವಿಗಳು ಬತ್ತುವುದು ಸಾಮಾನ್ಯ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾದಾಗ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತದೆ. ಆದರೆ ಈ ನೀರಿನಲ್ಲಿ ಫ್ಲೋರೈಡ್ ಹೆಚ್ಚಿರುವುದರಿಂದ ಪಟ್ಟಣದ ಬಹುತೇಕ ಜನರು ಇದನ್ನು ಮನೆ ಬಳಕೆಗಾಗಿ ಮಾತ್ರ ಉಪಯೋಗಿಸುತ್ತಿದ್ದಾರೆ. ಕುಡಿಯುವ ನೀರನ್ನು ಶುದ್ಧೀಕರಣ ಘಟಕಗಳಿಂದ ಖರೀದಿಸಲಾಗುತ್ತಿದೆ.
ಫ್ಲೋರೈಡ್ ಪೂರಿತ ನೀರು ಯಾವುದಕ್ಕೂ ಯೋಗ್ಯವಾಗಿಲ್ಲ. ಮನೆಗಳಿಗೆ ಅಳವಡಿಸಿರುವ ಪೈಪ್‌ಲೈನ್‌ನಲ್ಲಿ ಫ್ಲೋರೈಡ್ ಕಟ್ಟಿಕೊಳ್ಳುವುದರಿಂದ ಆರು ತಿಂಗಳಿಗೊಮ್ಮೆ ಸಾವಿರಾರು ರೂಪಾಯಿ ಖರ್ಚು ಮಾಡಿ ಪೈಪ್‌ಲೈನ್ ಬದಲಿಸಬೇಕಿದೆ. ಸೋಲಾರ್ ಹೀಟರ್, ಮನೆಗಳಲ್ಲಿ ಅಳವಡಿಸಿರುವ ಶುದ್ಧೀಕರಣ ಘಟಕಗಳು ಬೇಗನೆ ಕೆಟ್ಟು ನಿಲ್ಲುತ್ತಿವೆ. ಫ್ಲೋರೈಡ್ ಪೂರಿತ ನೀರಿನಿಂದ ತಲೆ ಕೂದಲು ಉದುರುವುದು, ಚರ್ಮ ರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ತುಂಗಭದ್ರಾ ನೀರನ್ನು ಮನೆಗಳಿಗೆ ಸರಬರಾಜು ಮಾಡಿದಲ್ಲಿ ಈ ಎಲ್ಲ ಸಮಸ್ಯೆಗಳಿಂದ ಪಟ್ಟಣದ ಜನತೆಗೆ ಮುಕ್ತಿ ಸಿಗಲಿದೆ ಎಂಬ ಆಶಯ ಸಾರ್ವಜನಿಕರದ್ದು.
ತುಂಗಭದ್ರಾ ಯೋಜನೆಯಿಂದ ಸಿಗುವ ಎರಡು ಲಕ್ಷ ಲೀಟರ್ ನೀರನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಶುದ್ಧೀಕರಿಸಿದ ಕುಡಿಯುವ ನೀರನ್ನು ನೇರವಾಗಿ ಮನೆಗಳಿಗೆ ಸರಬರಾಜು ಮಾಡಬಹುದು. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸುವ ಅಗತ್ಯವಿದೆ ಎನ್ನುತ್ತಾರೆ ಪಟ್ಟಣದ ಜನತೆ.
ಸೋಲಾರ್ ಪಾರ್ಕ್ ಆರಂಭವಾದಾಗಿನಿಂದ ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಮನೆಗಳಿಗೆ ಬೇಡಿಕೆ ಹೆಚ್ಚಿದೆ. ಶನೈಶ್ಚರ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುವುದರಿಂದ ಕುಡಿಯುವ ನೀರು ಸೇರಿದಂತೆ, ಮೂಲ ಸೌಕರ್ಯಗಳ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಿರುವ ಎರಡು ಲಕ್ಷ ಲೀಟರ್ ನೀರಿನ ಜೊತೆಗೆ ಹೆಚ್ಚುವರಿ ನೀರನ್ನು ಮಂಜೂರು ಮಾಡಿಸಿಕೊಳ್ಳುವ ತುರ್ತು ಇದೆ.
ನೀರು ಸಂಗ್ರಹಣಾಗಾರಗಳನ್ನು ಸ್ವಚ್ಛಗೊಳಿಸಿ ಗುಣಮಟ್ಟದ ಶುದ್ಧ ಕುಡಿಯುವ ನೀರನ್ನು ಮನೆಗಳಿಗೆ ಪೂರೈಸಲು ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂಬುದು ಪಟ್ಟಣ ನಿವಾಸಿಗಳ ಒತ್ತಾಯ.
ಪೈಪ್‌ಲೈನ್‌ಗೆ ಶೀಘ್ರ ಹರಾಜು
ತುಂಗಭದ್ರಾ ಕುಡಿಯುವ ನೀರನ್ನು ಸಂಗ್ರಹಿಸಲು ಪಟ್ಟಣದ ಹಿಂದೂಪುರ ರಸ್ತೆಯಲ್ಲಿರುವ ನೀರು ಸಂಗ್ರಹಣಾ ತೊಟ್ಟಿಯನ್ನು ಬಳಸಿಕೊಳ್ಳಲಾಗುವುದು. ಅಲ್ಲಿಂದ ಶಿರಾ ರಸ್ತೆ, ಪೆನುಗೊಂಡ ರಸ್ತೆಯಲ್ಲಿರುವ ಪಂಪ್‌ಹೌಸ್‌ಗಳ ಸಂಗ್ರಹಣಾಗಾರ ಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಿ, ಅಲ್ಲಿಂದ ವಿವಿಧ ಬಡಾ ವಣೆಗಳ ಮನೆಗಳಿಗೆ ನೀರು ಪೂರೈಸಲಾಗುವುದು. ಹಿಂದೂಪುರ ರಸ್ತೆಯಲ್ಲಿರುವ ಸಂಗ್ರಹಣಾಗಾರದಿಂದ ಶಿರಾ ರಸ್ತೆ, ಪೆನುಗೊಂಡ ರಸ್ತೆಯ ಸಂಗ್ರಹಗಾರಗಳಿಗೆ ಪೈಪ್‌ಲೈನ್ ಅಳವಡಿಸಲು ಶೀಘ್ರ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು.
ಜಾಫರ್, ಮುಖ್ಯಾಧಿಕಾರಿ, ಪುರಸಭೆ, ಪಾವಗಡ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಬ್ಬ ವ್ಯಕ್ತಿಗೆ ದಿನಕ್ಕೆ 50ರಿಂದ 100 ಲೀಟರ್ ನೀರಿನ ಅವಶ್ಯಕತೆ ಇದೆ. ಪಟ್ಟಣದ ಜನಸಂಖ್ಯೆ ಪ್ರಕಾರ 20 ಲಕ್ಷದಿಂದ 40 ಲಕ್ಷ ಲೀಟರ್ ನೀರಿನ ಅಗತ್ಯವಿದೆ.ಸಿರಾಜ್ ಜಾಫರ್, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.