ADVERTISEMENT

ಪಾವಗಡ | ದಾಹ ತೀರಿಸಲಿದೆ ತುಂಗಭದ್ರಾ

ಬಹುದಿನಗಳ ಕನಸು ಈಡೇರಿಸುವ ದಿನ ಸನ್ನಾಹ: ಪಾವಗಡ ತಾಲ್ಲೂಕಿನ 357 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 7:50 IST
Last Updated 6 ಜುಲೈ 2024, 7:50 IST
ಪಾವಗಡ ತಾಲ್ಲೂಕು ನಿಡಗಲ್ ಬೆಟ್ಟದ ಬಳಿ ನಿರ್ಮಿಸಿರುವ ಸಂಗ್ರಹಾಗಾರ
ಪಾವಗಡ ತಾಲ್ಲೂಕು ನಿಡಗಲ್ ಬೆಟ್ಟದ ಬಳಿ ನಿರ್ಮಿಸಿರುವ ಸಂಗ್ರಹಾಗಾರ   

ಪಾವಗಡ: ತಾಲ್ಲೂಕಿನ ಜನರ ಬಹು ದಿನಗಳ ಕನಸು ಕೆಲವೇ ದಿನಗಳಲ್ಲಿ ಈಡೇರುವ ಭರವಸೆ ಮೂಡಿದೆ. ತುಂಗಭದ್ರಾ ಕುಡಿಯುವ ನೀರಿನ ಯೋಜನೆಯಡಿ ತಾಲ್ಲೂಕಿನ ಗಡಿಗೆ ತುಂಗಭದ್ರಾ ಪ್ರಾಯೋಗಿಕವಾಗಿ ತಲುಪಲಿದ್ದಾಳೆ.

ತುಂಗಭದ್ರಾ ಡ್ಯಾಂನಿಂದ 135 ಕಿ.ಮೀ ದೂರದ ತಾಲ್ಲೂಕಿಗೆ ಪೈಪ್‌ಲೈನ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ತಾಲ್ಲೂಕಿನ 357 ಗ್ರಾಮಗಳು, ಪಟ್ಟಣ ಸೇರಿದಂತೆ ಬಳ್ಳಾರಿಯ ಚಿಲಕನಹಟ್ಟಿ, ಕೂಡ್ಲಗಿ, ಚಳ್ಳಕೆರೆ, ತುರುವನೂರು, ಮೊಳಕಾಲ್ಮೂರು ತಾಲ್ಲೂಕುಗಳ 787 ಗ್ರಾಮಗಳಿಗೆ ಶುದ್ಧೀಕರಿಸಲಾದ ಕುಡಿಯುವ ನೀರು ಪೂರೈಕೆಯಾಗಲಿದೆ.

ಸುಮಾರು 13.89 ಲಕ್ಷ ಜನರಿಗೆ ಯೋಜನೆಯಿಂದ ಅನುಕೂಲವಾಗಲಿದೆ. 2019ರ ಡಿಸೆಂಬರ್‌ 12ರಲ್ಲಿ ₹2,350 ಕೋಟಿ ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಇದೀಗ ಬಹುತೇಕ ಪೂರ್ಣಗೊಂಡಿದೆ. ತಾಲ್ಲೂಕಿಗೆ ನೀರು ಹರಿಸಲು ₹317 ಕೋಟಿ ವೆಚ್ಚವಾಗಿದೆ. ಅದರಲ್ಲಿ ₹5 ಕೋಟಿ ನಿರ್ವಹಣಾ ವೆಚ್ಚವೂ ಸೇರಿದೆ.

ADVERTISEMENT

ತಾಲ್ಲೂಕು-ಚಳ್ಳಕೆರೆ ಗಡಿಯಲ್ಲಿ 13 ಲಕ್ಷ ಲೀಟರ್ ಸಂಗ್ರಹಿಸುವ ಟ್ಯಾಂಕ್ ನಿರ್ಮಾಣವಾಗಿದೆ. ತಾಲ್ಲೂಕಿನ ನಿಡಗಲ್ (ಕಾರನಾಗನಹಟ್ಟಿ) ಬಳಿ ಒಂದು ಮಾಸ್ಟರ್ ಬ್ಯಾಲೆನ್ಸಿಂಗ್ ಸಂಗ್ರಹಾಗಾರ (ಎಂಬಿಆರ್) ನಿರ್ಮಿಸಲಾಗಿದೆ. ಈ ಸಂಗ್ರಹಾಗಾರಕ್ಕೆ ನಿತ್ಯ 13 ಲಕ್ಷ ಲೀಟರ್ ನೀರು ಹರಿಯಲಿದೆ. ಇಲ್ಲಿಂದ ಕೆಟಿ ಹಳ್ಳಿ, ಮೇಗಳಪಾಳ್ಯ, ಲಿಂಗದಹಳ್ಳಿ, ಬುಡ್ಡಾರೆಡ್ಡಿಹಳ್ಳಿ, ವೀರ್ಲಗೊಂದಿ, ರಾಜವಂತಿ, ಸಿಂಗರೆಡ್ಡಿಹಳ್ಳಿ, ಮರಿದಾಸನಹಳ್ಳಿಯಲ್ಲಿ ನಿರ್ಮಿಸಿರುವ ಜೋನಲ್ ಬ್ಯಾಲೆನ್ಸಿಂಗ್‌ ಸಂಗ್ರಹಾಗಾರಕ್ಕೆ (ಜೆಡ್‌ಬಿಆರ್) ನೀರು ಹರಿಯಲಿದೆ.

ನೀರು ಹರಿಯಲಾಗದ ಪ್ರದೇಶಗಳಿಗೆ ಪಂಪ್ ಮಾಡುವ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ, ಸಿಕೆ ಪುರ ಬಳಿ ಐಪಿಎಸ್ (ಇಂಟರ್ ಮಿಡಿಯಟ್ ಪಂಪಿಂಗ್ ಸ್ಟೇಷನ್) ನಿರ್ಮಿಸಲಾಗಿದೆ. ಈ ಎಲ್ಲ ಸಂಗ್ರಹಾಗಾರಗಳಿಂದ ಪ್ರತಿ ಗ್ರಾಮದ ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗಲಿದೆ.

ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಹಿಂದೆ ವಿವಿಧ ಸಂಘ ಸಂಸ್ಥೆಗಳು, ವಿವಿಧ ಪಕ್ಷಗಳ ಶಾಸಕರ ಶ್ರಮವಿದೆ. ಕಾನೂನಿನ ಹೋರಾಟವೂ ತಾಲ್ಲೂಕಿಗೆ ನೀರು ಹರಿಯಲು ಪ್ರಮುಖ ಕಾರಣ. ಫ್ಲೋರೈಡ್‌ ಪೂರಿತ ನೀರಿನಿಂದ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಸೂಚಿಸಿತ್ತು.

ಯೋಜನೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿರುವುದು ವಿಶೇಷ. ತುಂಗಭದ್ರಾ ಡ್ಯಾಂ ಬಳಿ ಕಾಲುವೆ ತೋಡಿ ನೀರು ಸರಾಗವಾಗಿ ಹರಿಯುವಂತೆ ಜಾಕ್‌ವೆಲ್ ನಿರ್ಮಿಸಲಾಗಿದೆ. ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ನೀರು ಹರಿದು ಶುದ್ಧೀಕರಣಗೊಂಡ ನೀರು ಇತರೆಡೆಗೆ ಪೂರೈಕೆಯಾಗಲಿದೆ.

ತಾಲ್ಲೂಕಿನಲ್ಲಿ 349 ಓವರ್ ಹೆಡ್ ಟ್ಯಾಂಕ್ ಕುಡಿಯುವ ನೀರು ಪೂರೈಸಲು ಮೀಸಲಿರಿಸಲಾಗಿದೆ. ಅವುಗಳಲ್ಲಿ 179 ಒಎಚ್‌ಟಿಗಳನ್ನು ಹೊಸದಾಗಿ ನಿರ್ಮಿಸಲಾಗಿದೆ.

ಟ್ಯಾಂಕ್‌ಗಳು ಖಾಲಿಯಾದ ಕೂಡಲೇ ನೀರು ಸರಬರಾಜಾಗುವಂತೆ, ಟ್ಯಾಂಕ್‌ಗಳು ತುಂಬಿದ ಕೂಡಲೇ ಪೂರೈಕೆ ನಿಲ್ಲುವ ತಂತ್ರಜ್ಞಾನ ಅಳವಡಿಸಲಾಗಿದೆ.

ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳನ್ನೂ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಿದಲ್ಲಿ ತಾಲ್ಲೂಕು ಸಮೃದ್ಧಗೊಳ್ಳಲಿದೆ ಎಂದು ಜನರು ಆಸೆಗಣ್ಣುಗಳೊಂದಿಗೆ ಎದುರು ನೊಡುತ್ತಿದ್ದಾರೆ.

ಪಾವಗಡ ತಾಲ್ಲೂಕಿನ ಕಾಮನಹಟ್ಟಿ ಬಳಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್

70 ಕಿ.ಮೀ.ಯಷ್ಟೇ ಬಾಕಿ ಈಗಾಗಲೇ ಪ್ರಾಯೋಗಿಕವಾಗಿ ಶುಕ್ರವಾರ ಸಂಜೆ ವೇಳೆಗೆ 52 ಕಿ.ಮೀ. ನೀರು ಹರಿದಿದೆ. ಇನ್ನೂ 70 ಕಿ.ಮೀ ದೂರಕ್ಕೆ ನೀರು ಹರಿದಲ್ಲಿ ತಾಲ್ಲೂಕಿನ ಗಡಿಗೆ ತುಂಗಭದ್ರಾ ನೀರು ತಲುಪುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಪಟ್ಟಣಕ್ಕೆ 2 ಲಕ್ಷ ಲೀಟರ್ ಪೂರೈಕೆ ಪಟ್ಟಣಕ್ಕೆ ತುಂಗಭದ್ರಾ ಯೋಜನೆಯಿಂದ ಎರಡು ಲಕ್ಷ ಲೀಟರ್ ಮೀಸಲಿರಿಸಲಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಈ ನೀರನ್ನು ಸಂಗ್ರಹಿಸಿಕೊಳ್ಳಲು ಸರಬರಾಜು ಮಾಡಲು ವ್ಯವಸ್ಥೆ ಮಾಡಿಕೊಂಡಿಲ್ಲ. ಹೀಗಾಗಿ ಪಟ್ಟಣದ ಜನತೆ ಸದ್ಯ ನೀರು ಸಂಗ್ರಹಿಸಿ ಪೂರೈಸುವ ವ್ಯವಸ್ಥೆಯಾಗುವವರೆಗೆ ಯೋಜನೆಯಿಂದ ವಂಚಿತರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.