ತುರುವೇಕೆರೆ: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ, ಶಿಥಿಲ ಕೊಠಡಿಗಳು ಸೇರಿದಂತೆ ಮೂಲಸೌಕರ್ಯಗಳಿಲ್ಲದೆ ಸೊರಗಿದ್ದು, ಪೋಷಕರು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವಂತಾಗಿದೆ.
ತಾಲ್ಲೂಕಿನಲ್ಲಿ 166 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 83 ಹಿರಿಯ ಪ್ರಾಥಮಿಕ ಶಾಲೆ ಹಾಗೂ 17 ಪ್ರೌಢ ಶಾಲೆಗಳಿವೆ. 266 ಶಾಲೆಗಳಲ್ಲಿ 1,043 ಕೊಠಡಿಗಳಿವೆ. ಅವುಗಳಲ್ಲಿ ಆರ್‌ಸಿಸಿ ಚಾವಣಿ ಇರುವ 600 ಕೊಠಡಿಗಳಿವೆ. 24 ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 443 ಹೆಂಚಿನ ಕೊಠಡಿಗಳಿವೆ. ಕೆಲವೆಡೆ ಹೆಂಚುಗಳು ಒಡೆದು ಮಳೆಗಾಲದಲ್ಲಿ ಸೋರುತ್ತವೆ. ಮತ್ತೆ ಕೆಲವೆಡೆ ಬಿರುಕು ಬಿಟ್ಟಿವೆ.
ಕೆಲವು ಶಾಲೆಗಳಲ್ಲಿನ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, 133 ಕೊಠಡಿಗಳನ್ನು ಕೆಡವಲು ಹಾಗೂ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 305 ಕೊಠಡಿಗಳು ಶಿಥಿಲಗೊಂಡಿದ್ದು ದುರಸ್ತಿ ಮಾಡಬೇಕಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ರಾಜ್ಯ ಪ್ರಕೃತಿ ವಿಕೋಪ ಅನಿರ್ಭಂದಿತ ಅನುದಾನದಡಿ ಅಂದಾಜು ಪಟ್ಟಿ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ತಾಲ್ಲೂಕಿನ ಅರೇಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎರಡು ಕೊಠಡಿಗಳನ್ನು ದುರಸ್ತಿ ಮಾಡಬೇಕಿದೆ. ಹುಲಿಕಲ್ ಪ್ರೌಢಶಾಲೆಯಲ್ಲಿ ಮೂರು, ಆಲದಹಳ್ಳಿ 3, ಅಜ್ಜನಹಳ್ಳಿ 4, ಮಾವಿನಕೆರೆ 4, ತುಯ್ಯಲಹಳ್ಳಿ 1, ಅಂಚಿಹಳ್ಳಿ 5, ಮುಗಳೂರು 1 ಮತ್ತು ಕೆಪಿಎಸ್ ದಂಡಿನಶಿವರ ಪ್ರೌಢಶಾಲೆ ಸೇರಿ ಒಟ್ಟು 37 ತರಗತಿ ಕೊಠಡಿಗಳು ದುರಸ್ತಿ ಹಂತದಲ್ಲಿವೆ. ಬಹುಪಾಲು ಪ್ರೌಢ ಶಾಲೆಗಳು ಸುಣ್ಣ, ಬಣ್ಣ ಕಾಣದೆ ಪಾಳು ಕೊಠಡಿಗಳಂತೆ ಭಾಸವಾಗುತ್ತಿವೆ.
ಆಲದಹಳ್ಳಿ ಶಾಲೆಯಲ್ಲಿ ಒಂದು ಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದು ತುರ್ತಾಗಿ ನೆಲಸಮಗೊಳಿಸಿ ಹೊಸ ಕಟ್ಟಡಗಳನ್ನು ಕಟ್ಟಬೇಕಿದೆ. ಹುಲೀಕೆರೆ 2, ತುಯಲಹಳ್ಳಿಯ 1 ಕೊಠಡಿ ನಿರ್ಮಾಣಕ್ಕೆ ಶಾಲೆಯಿಂದ ಬೇಡಿಕೆ ಬಂದಿದೆ. ಸಂಪಿಗೆ ಹೊಸಹಳ್ಳಿ, ಕೊಡಗೀಹಳ್ಳಿ ಹಾಗೂ ದಬ್ಬೇಘಟ್ಟ ಸರ್ಕಾರಿ ಶಾಲೆಗೆ ಹೊಸದಾಗಿ ಅಡುಗೆ ಕೋಣೆ ಅಗತ್ಯವಿದೆ ಎಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 305 ಕೊಠಡಿಗಳು ಶಿಥಿಲಗೊಂಡಿವೆ. ಅವುಗಳ ದುರಸ್ತಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿದೆ. ಅನುದಾನ ಬಂದ ತಕ್ಷಣ ದುರಸ್ತಿ ನಡೆಯಲಿದೆ.ಎನ್.ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ
ಪಟ್ಟಣದ ಜಿಜೆಸಿ ಕಾಲೇಜಿನ ಕಚೇರಿ ಕೊಠಡಿ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣವಾಗಿದ್ದು, ಆನಂತರ ನಿರ್ಮಾಣವಾದ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ.
ಅಂಚೀಹಳ್ಳಿ ಪ್ರೌಢಶಾಲೆಯ ಕೆಲ ಗೋಡೆಗಳು ಬಿರುಕು ಬಿಟ್ಟಿವೆ. ಕಳ್ಳನಕೆರೆ ಗೊಲ್ಲರಹಟ್ಟಿ, ದೊಡ್ಡಗೋರಾಘಟ್ಟ ಪ್ರಾಥಮಿಕ ಶಾಲೆ, ಹೆಗ್ಗೆರೆ, ಹಡವನಹಳ್ಳಿ ಗೊಲ್ಲರಹಟ್ಟಿ, ತೊರೆಮಾವಿನಹಳ್ಳಿ, ಆರ್.ಎಸ್. ಪಾಳ್ಯ, ಪಟ್ಟಣದ ಬಾಲಕರ ಶಾಲೆ, ಜಿಎಂಎಚ್.ಪಿ.ಎಸ್, ಕರಡಿಗೆರೆ ಕಾವಲ್, ದೇವಿಹಳ್ಳಿ, ದೇವೇಗೌಡ ಬಡಾವಣೆ, ಹೆಡಗೀಹಳ್ಳಿ, ಗೋಣಿ ತುಮಕೂರು, ಕೊಟ್ಟೂರನ ಕೊಟ್ಟಿಗೆ, ಕೊಂಡಜ್ಜಿ, ಅಕ್ಕಳಸಂದ್ರ, ಚಿಮ್ಮನಹಳ್ಳಿ, ದಾಸಿಹಳ್ಳಿ, ಚೆಂಡೂರು, ಎಂಎನ್‌ಎಚ್‌ಪಿಎಸ್ ಶಾಲೆಗಳ ಕೊಠಡಿಗಳು ದುರಸ್ತಿಗೆ ಕಾಯುತ್ತಿವೆ.
ಈ ಶಾಲೆಗಳ ಚಾವಣಿಯ ಸಿಮೆಂಟ್ ಕಿತ್ತು ಉದುರುತ್ತಿದೆ. ಕೆಲ ಶಾಲೆಗಳ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ನೆಲಕ್ಕೆ ಹಾಕಿದ್ದ ಸಿಮೆಂಟ್ ಕಿತ್ತು ಮಕ್ಕಳು ಓಡಾಡಲು ಕಷ್ಟವಾಗುತ್ತದೆ. ಮಳೆಗಾಲ ಬಂದರೆ ಸಾಕು ಕೊಠಡಿ ಮಹಡಿಯ ತಗ್ಗಿನಲ್ಲಿ ನೀರು ನಿಂತು ಕೊಠಡಿಯೊಳಗೆ ಸೋರುತ್ತದೆ. ಪುಸ್ತಕಗಳು, ಕಚೇರಿ ದಾಖಲೆಗಳು ಹಾನಿಯಾಗುವ ಭಯ ಶಿಕ್ಷಕರದು.
ಕೆಲ ಶಾಲೆಗಳ ಬಾಗಿಲು, ಕಿಟಕಿಗಳು ಮುರಿದು ಮಳೆ ನೀರು ಕೊಠಡಿಗೆ ರಾಚುತ್ತದೆ. ಕೆಲ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಶಿಕ್ಷಕರ ಸಮಸ್ಯೆ ಬಿಗಡಾಯಿಸಿದೆ.
ಬಹುತೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ಮಕ್ಕಳಿಗೆ ನೀರು ವಿತರಿಸುವುದು ಕಸನಸಿನ ಮಾತಾಗಿದೆ. ಬಿಸಿಯೂಟ ತಯಾರಿಸಲು, ಕ್ರೀಡಾ ಸಾಮಗ್ರಿ ಇಡಲು, ಪ್ರಯೋಗಾಲಯ ಹಾಗೂ ಗ್ರಂಥಾಲಯದ ಪುಸ್ತಕಗಳನ್ನು ಸಂಗ್ರಹಿಸಲು ಸಮರ್ಪಕ ಕೊಠಡಿಗಳಿಲ್ಲದೆ ಶಿಕ್ಷಕರು ಪರದಾಡುವಂತಾಗಿದೆ.
ತಾಲ್ಲೂಕಿನ ವಿವಿಧ ಭಾಗದಲ್ಲಿನ 33 ಶಾಲೆಗಳಲ್ಲಿ ನಿರ್ಮಾಣವಾಗುತ್ತಿರುವ ವಿವೇಕ ಯೋಜನೆ ಶಾಲಾ ಕೊಠಡಿ ಕಾಮಗಾರಿ ಕುಂಟುತ್ತಾ ಸಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಕಟ್ಟಡಗಳೂ ಗುಣಮಟ್ಟದ ಕೊರತೆಯಿಂದಾಗಿ ಮಳೆ ಬಂದರೆ ಸೋರುತ್ತವೆ. ಕೊಠಡಿಗಳ ದುರಸ್ತಿ ಕಾಮಗಾರಿ ಮಾಡುವಾಗಲೂ ಗುತ್ತಿಗೆದಾರರು ಗುಣಮಟ್ಟದ ವಸ್ತುಗಳನ್ನು ಬಳಸದ ಕಾರಣ ದುರಸ್ತಿ ಮಾಡಿದ ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ. ಇಂತಹ ಶಾಲೆಗಳಿಗೆ ಮಕ್ಕಳನ್ನು ಹೇಗೆ ಕಳುಹಿಸುವುದು ಎನ್ನುವುದು ಪೋಷಕರ ಪ್ರಶ್ನೆ.
ತಾಲ್ಲೂಕಿನಲ್ಲಿ 14 ಉರ್ದು ಶಾಲೆಗಳಿವೆ. ಅವುಗಳಲ್ಲಿ ಕೆಲವು ಹಳೆಯ ಹೆಂಚಿನ ಕಟ್ಟಡಗಳಾಗಿದ್ದು, ಪೀಠೋಪಕರಣ, ಗೋಡೆ, ನೆಲ ಹಾಳಾಗಿವೆ. ಅಲ್ಲೊಂದು, ಇಲ್ಲೊಂದು ಮಾತ್ರ ಆರ್‌ಸಿಸಿ ಕಟ್ಟಡಗಳಿವೆ. ಪಟ್ಟಣದ ಬಿಇಒ ಕಚೇರಿಯ ಕೂಗಳತೆ ದೂರದಲ್ಲಿಯೇ ಉರ್ದು ಶಾಲೆ ಇದೆ. ಅಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಲು ಸುಸಜ್ಜಿತ ಕೊಠಡಿ ಇಲ್ಲದೆ ಚಿಕ್ಕ ಶೆಡ್‌ನೊಳಗೆ ಬಿಸಿಯೂಟ ತಯಾರಿಸುವುದು ಸಿಬ್ಬಂದಿಗೆ ಕಷ್ಟವಾಗಿದೆ.
ಅಪಾಯದ ಹಂತದಲ್ಲಿ ಕೊಠಡಿ
ತಾಲ್ಲೂಕಿನಲ್ಲಿ ಐವತ್ತು ವರ್ಷ ದಾಟಿರುವ ಸಾಕಷ್ಟು ಹೆಂಚಿನ ಶಾಲೆಗಳು ಅಪಾಯದ ಹಂತದಲ್ಲಿದ್ದು ಅಲ್ಲಿ ಹೊಸ ಕಟ್ಟಡದ ಅಗತ್ಯವಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಇದ್ದು ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಶಿಕ್ಷಕರ ನೇಮಕಾತಿಯಾಗಬೇಕು. ಶಾಲೆಗೆ ಬೇಕಾದ ಸೌಕರ್ಯವನ್ನು ಸರ್ಕಾರ ಒದಗಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜು ಮುನಿಯೂರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.