ತುಮಕೂರು: ಹಿಂದೂ ಯುವತಿಯ ಜತೆ ಬೈಕ್‌ನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಬಜರಂಗದಳದ ಮುಖಂಡ ಮಂಜು ಭಾರ್ಗವ್ ಸೇರಿ ಆರು ಜನರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಶನಿವಾರ ನಗರದ ನಿವಾಸಿಗಳಾದ ತ್ಯಾಗರಾಜ್, ಶರತ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಗಾಯಗೊಂಡಿರುವ ಸಲ್ಮಾನ್ ಪಾಷ (26) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿರುವ ಸಲ್ಮಾನ್ ಪರಿಚಯದ ಯುವತಿಯನ್ನು ಪ್ರತಿದಿನ ಬೈಕ್‌ನಲ್ಲಿ ಮನೆಯಿಂದ ಕೆಲಸ ಮಾಡುವ ಸ್ಥಳಕ್ಕೆ ಬಿಟ್ಟು, ಕರೆದೊಯ್ಯುತ್ತಿದ್ದರು.
‘ಶುಕ್ರವಾರ ರಾತ್ರಿ ಯುವತಿಯನ್ನು ಮನೆಯ ಬಳಿ ಬಿಟ್ಟು ವಾಪಸ್ ಹೋಗುವಾಗ ಬನಶಂಕರಿ ಹತ್ತಿರ ಬೈಕ್ ಅಡ್ಡಗಟ್ಟಿದ ಕೆಲವರು ಹಲ್ಲೆ ನಡೆಸಿದರು. ಸ್ಥಳಕ್ಕೆ ಬಂದ ನನ್ನ ಸ್ನೇಹಿತರನ್ನು ಹೆದರಿಸಿ ಓಡಿಸಿದರು. ಕಲ್ಲು, ರಾಡ್‌ನಿಂದ ಹೊಡೆದಿದ್ದಾರೆ’ ಎಂದು ಸಲ್ಮಾನ್ ದೂರು ನೀಡಿದ್ದಾರೆ.
‘ಹಿಂದೂ ಹುಡುಗಿಯ ಜತೆ ಓಡಾಡುತ್ತಿರುವುದನ್ನು ಗಮನಿಸಿ ಸಾಯಿಸುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾರೆ. ಮಂಜು ಭಾರ್ಗವ್ ಕುಮ್ಮಕ್ಕಿನಿಂದ ಜೀವನ್, ಶರತ್, ಹನುಮಂತರಾಜು, ರವಿ ಮತ್ತಿತರರು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆದ ಸ್ಥಳಕ್ಕೆ ಬಂದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಲ್ಮಾನ್ ನೀಡಿದ ದೂರಿನ ಮೇರೆಗೆ ಜೀವನ್, ಶರತ್, ಹನುಮಂತರಾಜು, ರವಿ, ಮಂಜು ಭಾರ್ಗವ್ ಮತ್ತು ಮತ್ತೊಬ್ಬನ ವಿರುದ್ಧ ಐಪಿಸಿ 307 (ಕೊಲೆ ಯತ್ನ) ಹಾಗೂ ಇತರ ಕಾಲಂ ಅಡಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.