ತುಮಕೂರು: ‘ಹಲವು ವರ್ಷಗಳ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಗುತ್ತದೆ. ಬಾಡಿಗೆ ಕಟ್ಟಡ ಬಿಟ್ಟು, ಇನ್ನು ಮುಂದೆ ಸ್ವಂತ ಮನೆಯಲ್ಲಿ ವಾಸ ಇರಬಹುದು’ ಎಂಬ ಪೌರ ಕಾರ್ಮಿಕರ ಕನಸು ಸದ್ಯಕ್ಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ.
ನಗರ ಹೊರ ವಲಯದ ದಿಬ್ಬೂರಿನ ಬಳಿ 2 ಎಕರೆ ಪ್ರದೇಶದಲ್ಲಿ ಸುಮಾರು ₹3.89 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆಯಿಂದ ಕಾಯಂ ಪೌರ ಕಾರ್ಮಿಕರಿಗಾಗಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಮುಗಿದು ಒಂದೂವರೆ ತಿಂಗಳು ಕಳೆದರೂ ಅರ್ಹರಿಗೆ ಮನೆಗಳನ್ನು ಹಸ್ತಾಂತರ ಮಾಡಿಲ್ಲ. ಮನೆಗಳನ್ನು ವಿತರಿಸುವ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದುವರೆಗೆ 20 ಕುಟುಂಬಗಳಿಗೆ ಮಾತ್ರ ಇಲ್ಲಿ ವಾಸಕ್ಕೆ ಅವಕಾಶ ನೀಡಲಾಗಿದೆ.
ಇದೇ ಸೆ.23ರಂದು ಪೌರ ಕಾರ್ಮಿಕರ ದಿನ ಆಚರಣೆಯ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಜಿ.ಪರಮೇಶ್ವರ ಅವರು ಸಾಂಕೇತಿಕವಾಗಿ ಮನೆಗಳ ಬೀಗವನ್ನು ಕಾರ್ಮಿಕರಿಗೆ ನೀಡಿದ್ದರು. ಈ ಕಾರ್ಯಕ್ರಮದ ನಂತರ ಹೆಚ್ಚಿನ ಬೆಳವಣಿಗೆಗಳು ಆಗಿಲ್ಲ. ಎಲ್ಲರಿಗೂ ಮನೆಗಳನ್ನು ವಿತರಿಸಿ, ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಪಾಲಿಕೆಯ ಅಧಿಕಾರಿಗಳು ಮಾಡುತ್ತಿಲ್ಲ.
ಈ ಹಿಂದೆ 2016ರಲ್ಲಿ ‘ಗೃಹ ಭಾಗ್ಯ’ ಯೋಜನೆಯಡಿ 52 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಉದ್ಘಾಟನೆಯ ಭಾಗ್ಯ ಒದಗಿ ಬಂದಿರಲಿಲ್ಲ.
ಅರ್ಹ ಪೌರ ಕಾರ್ಮಿಕರನ್ನು ಗುರುತಿಸಲಾಗಿದೆ. ಈಗಾಗಲೇ ಮನೆಗಳನ್ನು ವಾಸಕ್ಕೆ ನೀಡಲಾಗುತ್ತಿದೆ. ಆದಷ್ಟು ಬೇಗ ಈ ಕೆಲಸ ಮುಗಿಯಲಿದೆ.ಬಿ.ವಿ.ಅಶ್ವಿಜ, ಆಯುಕ್ತರು, ಮಹಾನಗರ ಪಾಲಿಕೆ
ಮಹಾನಗರ ಪಾಲಿಕೆಯಲ್ಲಿ 110 ಕಾಯಂ, ಹೊರಗುತ್ತಿಗೆ, ಗುತ್ತಿಗೆ, ನೇರ ಪಾವತಿಯಡಿ ಸುಮಾರು 500 ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಹಲವರು ಸ್ವಂತ ಸೂರಿಲ್ಲದೆ ಬಾಡಿಗೆ ಕಟ್ಟಡದಲ್ಲಿ ವಾಸವಿದ್ದಾರೆ. ಕಾರ್ಮಿಕರು ಪಡೆಯುವ ಸಂಬಳದಲ್ಲಿ ಅರ್ಧ ಹಣ ಮನೆಯ ಬಾಡಿಗೆಗೆ ಹೋಗುತ್ತಿದೆ. ಅಗತ್ಯ ಸೌಲಭ್ಯ ಕಲ್ಪಿಸಿ, ಅವರಿಗೆ ನೆರವಾಗಬೇಕಿದ್ದ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಮೌನವಾಗಿದ್ದಾರೆ.
‘ಪೌರ ಕಾರ್ಮಿಕರ ದಿನ ಆಚರಣೆ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಕಾರ್ಮಿಕರನ್ನು ನೆನಪು ಮಾಡಿಕೊಳ್ಳುತ್ತಾರೆ. ಬಾಕಿ ದಿನಗಳಲ್ಲಿ ಅವರ ಕಷ್ಟ ಏನು ಎಂಬುವುದನ್ನು ಯಾರೊಬ್ಬರೂ ಕೇಳುವುದಿಲ್ಲ. ಹೊರ ಗುತ್ತಿಗೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅಗತ್ಯವಾಗಿ ಬೇಕಾದ ಶೂ, ಸಾಕ್ಸ್, ಗ್ಲೌಸ್ ವಿತರಿಸುತ್ತಿಲ್ಲ. ಯಾವುದೇ ಸಲಕರಣೆಗಳು ಇಲ್ಲದೆ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಪಾಲಿಕೆಯ ಪೌರ ಕಾರ್ಮಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ತಾರತಮ್ಯ ಮಾಡದೆ ಎಲ್ಲ ಪೌರ ಕಾರ್ಮಿಕರನ್ನು ಒಂದೇ ದೃಷ್ಟಿಯಿಂದ ನೋಡಬೇಕು. ಮನೆ ಇಲ್ಲದ ಎಲ್ಲರಿಗೂ ಮನೆ ಕಟ್ಟಿ ಕೊಡುವ ಕೆಲಸಕ್ಕೆ ಪಾಲಿಕೆಯ ಅಧಿಕಾರಿಗಳು ಮುಂದಾಗಬೇಕು’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು.
ಎಲ್ಲ ಕಾರ್ಮಿಕರಿಗೆ ವಸತಿ ಕೊಟ್ಟಿಲ್ಲ
ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಕನಿಷ್ಠ ಶೇ 10 ರಷ್ಟು ಪೌರ ಕಾರ್ಮಿಕರಿಗಾದರೂ ಮನೆ ಕೊಡುವ ಕೆಲಸವಾಗಿಲ್ಲ. ದಿಬ್ಬೂರು ಬಳಿ ವಸತಿ ಗೃಹಗಳನ್ನು ಉದ್ಘಾಟನೆ ಮಾಡಿ ಒಂದೂವರೆ ತಿಂಗಳು ಕಳೆದರೂ ವಾಸಕ್ಕೆ ನೀಡಿಲ್ಲ. ಅಧಿಕಾರಿಗಳ ನಿರಾಸಕ್ತಿ ನಿರ್ಲಕ್ಷ್ಯದಿಂದ ಈ ಕಾರ್ಯ ವಿಳಂಬವಾಗಿದೆ. ಅಧಿಕಾರಿಗಳಿಗೆ ಪೌರ ಕಾರ್ಮಿಕರ ಕಷ್ಟ ಕಾಣಿಸುತ್ತಿಲ್ಲ. ಸೈಯದ್ ಮುಜೀಬ್ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.