ADVERTISEMENT

ಹಾಲು ಖರೀದಿಗೆ ಏಕರೂಪ ತಂತ್ರಾಂಶ

ಹಾಲು ಉತ್ಪಾದಕರಿಗೆ ನೆರವು; ಪಾರದರ್ಶಕತೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 5:01 IST
Last Updated 25 ಜೂನ್ 2024, 5:01 IST
ಡೇರಿ
ಡೇರಿ   

ತುಮಕೂರು: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಖರೀದಿಗೆ ಏಕರೂಪ ತಂತ್ರಾಂಶ ಅಳವಡಿಸುವ ಕಾರ್ಯ ಜಿಲ್ಲೆಯಲ್ಲಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನೂ ಒಂದೆರಡು ವಾರಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ.

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ವ್ಯಾಪ್ತಿಯಲ್ಲಿ 1,345 ಸಂಘಗಳಿದ್ದು, ಅದರಲ್ಲಿ 1,200ಕ್ಕೂ ಹೆಚ್ಚು ಡೇರಿಗಳಲ್ಲಿ ಹೊಸ ತಂತ್ರಾಂಶ ಅಳವಡಿಸುವ ಕೆಲಸ ಪೂರ್ಣಗೊಂಡಿದ್ದು, ಇತರೆಡೆಗಳಲ್ಲೂ ಈ ಕೆಲಸ ಭರದಿಂದ ಸಾಗಿದೆ.

ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಕೊಟ್ಟಿದ್ದು, ರಾಜ್ಯದ ಎಲ್ಲಾ ಡೇರಿಗಳಲ್ಲೂ ಅಳವಡಿಸುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಆದರೆ ಇತರೆ ಜಿಲ್ಲೆಗಳಿಗಿಂತ ಹೆಚ್ಚು ಡೇರಿಗಳಲ್ಲಿ ಅಳವಡಿಸುವ ಮೂಲಕ ಜಿಲ್ಲೆ ಮುಂಚೂಣಿ ಕಾಯ್ದುಕೊಂಡಿದೆ. ಇದು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ಡೇರಿಗಳಿಗೆ ಹಾಲು ಸರಬರಾಜು ಮಾಡುವ ರೈತರಿಗೆ ಈವರೆಗೆ ಜಿಡ್ಡಿನಂಶದ ಆಧಾರದ ಮೇಲೆ ಹಾಲು ದರವನ್ನು ನಿಗದಿಪಡಿಸಲಾಗುತಿತ್ತು. ಇದು ಸಮರ್ಪಕವಾಗಿ, ಕರಾರುವಕ್ಕಾಗಿ ಆಗುತ್ತಿಲ್ಲ. ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಇರುತಿತ್ತು. ಆದರೆ ಈಗ ಅಳವಡಿಸಿರುವ ತಂತ್ರಾಂಶವು ನಿಖರವಾದ ಮಾಹಿತಿ ನೀಡಲಿದೆ. ಇದರಿಂದ ಲೀಟರ್‌ಗೆ ₹4ರಿಂದ ₹5ರ ವರೆಗೂ ಹೆಚ್ಚು ಹಣ ಸಿಗಲಿದೆ. ಮತ್ತಷ್ಟು ಪಾರದರ್ಶಕತೆ ತಂದು ರೈತರಿಗೆ ನೆರವಾಗುವ ಉದ್ದೇಶದಿಂದ ಈ ತಂತ್ರಾಂಶ ಅಳವಡಿಸಿಕೊಳ್ಳಲಾಗುತ್ತಿದೆ ಎಂಬುದು ತುಮುಲ್ ಅಧಿಕಾರಿಗಳ ವಿವರಣೆ.

ಹೊಸ ತಂತ್ರಾಂಶದಲ್ಲಿ ಜಿಡ್ಡಿನಂಶ ಹಾಗೂ ಎಸ್‌ಎನ್‌ಎಫ್ (ಜಿಡ್ಡಿನಂಶವಲ್ಲದ ಘನವಸ್ತು) ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ಕರಾರುವಕ್ಕಾಗಿ ತೋರಿಸುತ್ತದೆ. ಈ ತಪಾಸಣೆ ಮುಗಿದ ನಂತರ ಹಾಲನ್ನು ಅಳತೆ ಮಾಡಲಾಗುತ್ತದೆ. ತಕ್ಷಣವೇ ಎಷ್ಟು ಹಾಲು ಎಂಬುದು ಗೊತ್ತಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ತಕ್ಷಣ ಜಿಡ್ಡಿನಂಶ, ಎಸ್‌ಎನ್‌ಎಫ್ ಎಷ್ಟಿದೆ, ಎಷ್ಟು ಹಾಲು ಹಾಕಿದ್ದೀರಿ, ಹಾಲಿಗೆ ಎಷ್ಟು ಬೆಲೆ ನಿಗದಿಯಾಗಿದೆ, ಒಟ್ಟು ಎಷ್ಟು ಹಣ ಕೊಡಬೇಕಿದೆ ಎಂಬ ವಿವರಗಳನ್ನು ಒಳಗೊಂಡ ಚೀಟಿ ಕೊಡಲಾಗುತ್ತದೆ. ಜತೆಗೆ ರೈತರ ಮೊಬೈಲ್‌ಗೆ ಮಾಹಿತಿ ರವಾನೆಯಾಗುತ್ತದೆ. ಪ್ರತಿ ದಿನವೂ ಇದೇ ಪ್ರಕ್ರಿಯೆ ನಡೆಯುವುದರಿಂದ ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿವರಗಳು ರೈತರಿಗೆ ಸಿಗುತ್ತದೆ.

ಹಣ ಬಟವಾಡೆ ಮಾಡುವ ರೈತರ ಬ್ಯಾಂಕ್ ಖಾತೆಗೆ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಮಾಡಲಾಗಿರುತ್ತದೆ. ಹಾಲು ಸರಬರಾಜು, ಬಟವಾಡೆಯ ವಿವರಗಳನ್ನು ಪಡೆದುಕೊಳ್ಳಲು ಡೇರಿ ಅಭಿವೃದ್ಧಿಪಡಿಸಿರುವ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಎಲ್ಲಾ ವಿವರಗಳು ಲಭ್ಯವಾಗುತ್ತವೆ. ಹಾಲು ಸರಬರಾಜು ಮಾಡಿದ ರೈತರಿಗೆ ಎಷ್ಟು ಹಣ ಬಟವಾಡೆ ಮಾಡಲಾಗಿದೆ, ಎಷ್ಟು ಬಾಕಿ ಉಳಿದುಕೊಂಡಿದೆ ಎಂಬ ಮಾಹಿತಿ ಸಿಗುತ್ತದೆ. ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನ ರೈತ ಖಾತೆಗೆ ನೇರವಾಗಿ ಜಮೆ ಮಾಡಗಲು, ರೈತರ ಹೆಸರಿನಲ್ಲಿ ಮತ್ತೊಬ್ಬರು ವಂಚಿಸುವುದನ್ನು ತಪ್ಪಿಸಲು ಸಹಕಾರಿಯಾಗಿದೆ ಎಂದು ತುಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಪಿ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಾಲು ಉತ್ಪಾದನೆ ಹೆಚ್ಚಳ

ತುಮಕೂರು: ತುಮುಲ್ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದು ಪ್ರಸ್ತುತ ನಿತ್ಯ 9.72 ಲಕ್ಷ ಕೆ.ಜಿ ಸಂಗ್ರಹವಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 9.25 ಲಕ್ಷ ಕೆ.ಜಿ ಸಂಗ್ರಹವಾಗುತಿತ್ತು. ಹಾಲು ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ರೈತರು ನೀಡುವ ಹಾಲಿನ ಬೆಲೆಯನ್ನು ಕಡಿಮೆ ಮಾಡಿಲ್ಲ. ಸಾಮಾನ್ಯವಾಗಿ ಹಾಲು ಉತ್ಪಾದನೆ ಹೆಚ್ಚಳವಾದ ಸಮಯದಲ್ಲಿ ಬೆಲೆ ಇಳಿಕೆ ಮಾಡಲಾಗುತ್ತಿದೆ. ಈ ಬಾರಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲೋಕಿಸಿ ಬೆಲೆ ಇಳಿಕೆ ಮಾಡಬೇಕೆ? ಬೇಡವೆ? ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತುಮುಲ್ ಮೂಲಗಳು ತಿಳಿಸಿವೆ. ಪ್ರತಿನಿತ್ಯ ಮುಂಬೈ ನಗರದಲ್ಲಿ ಸುಮಾರು 2 ಲಕ್ಷ ಕೆ.ಜಿ ಹಾಲು ಮಾರಾಟ ಮಾಡಲಾಗುತ್ತಿದೆ. ಪೌಡರ್ ಬೆಣ್ಣೆ ಇತರೆ ಉತ್ಪನ್ನಗಳ ತಯಾರಿಕೆಗೆ 2.80 ಲಕ್ಷ ಕೆ.ಜಿ ಬಳಕೆ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.