ADVERTISEMENT

Union Budget 2024: ತುಮಕೂರಿನ ಜನ ಏನೆಂದರು?

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 6:44 IST
Last Updated 24 ಜುಲೈ 2024, 6:44 IST
<div class="paragraphs"><p>ಬಜೆಟ್ ಮಂಡನೆಗೂ ಮುನ್ನ ಟ್ಯಾಬ್ ಪ್ರದರ್ಶಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್</p></div>

ಬಜೆಟ್ ಮಂಡನೆಗೂ ಮುನ್ನ ಟ್ಯಾಬ್ ಪ್ರದರ್ಶಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

   

– ರಾಯಿಟರ್ಸ್ ಚಿತ್ರ

ತುಮಕೂರು: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ತುಮಕೂರು– ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ವಿಶೇಷ ಅನುದಾನದ ಸಿಗುವ ನಿರೀಕ್ಷೆ ಸಾಕಾರಗೊಂಡಿಲ್ಲ.

ADVERTISEMENT

‘ಹೆದ್ದಾರಿ ಸಂಚಾರ ದಟ್ಟಣೆ ತಗ್ಗಿಸಲು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೊಡ್ಡ ಯೋಜನೆ ಬಜೆಟ್‌ನಲ್ಲಿ ಪ್ರಕಟವಾಗಲಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದರು. ಆದರೆ ಅದು ಬಜೆಟ್‌ನಲ್ಲಿ ಕಾಣಿಸಿಲ್ಲ.

ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಎರಡು ವರ್ಷದ ಹಿಂದಿನ ಬಜೆಟ್‌ನಲ್ಲಿ ₹5,300 ಕೋಟಿ ಘೋಷಿಸಲಾಗಿತ್ತು. ಆದರೆ ಈವರೆಗೂ ಈ ಹಣ ಬಿಡುಗಡೆಯಾಗಿಲ್ಲ. ಈ ಬಾರಿಯ ಬಜೆಟ್‌ನಲ್ಲೂ ಪ್ರಸ್ತಾಪವಾಗಿಲ್ಲ.

ಲೋಕಸಭೆ ಚುನಾವಣೆ ಸಮಯದಲ್ಲಿ ತುಮಕೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ವಿಚಾರವನ್ನು ಪ್ರಸ್ತಾಪಿಸಿದ್ದರು. ಆದರೆ ಬಜೆಟ್‌ನಲ್ಲಿ ಯಾವುದೇ ಭರವಸೆ ಸಿಕ್ಕಿಲ್ಲ. ತುಮಕೂರು ಕ್ಷೇತ್ರ ಸೇರಿದಂತೆ ಜಿಲ್ಲೆಗೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು, ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ನೆರವು ಸಿಗುವ ನಿರೀಕ್ಷೆ ಹುಸಿಯಾಗಿದೆ. ಬಿಜೆಪಿ ಗೆಲ್ಲಿಸಿದರೂ ಕೇಂದ್ರ ಸರ್ಕಾರ ನಮ್ಮನ್ನು ಮರೆತಿದೆ ಎಂಬ ಆಕ್ಷೇಪದ ಮಾತುಗಳು ಕೇಳಿ ಬಂದಿವೆ.

ಕೆಲವು ರಾಜ್ಯಗಳಿಗೆ ವಿಶೇಷ ಅನುದಾನ

ಈ ಬಾರಿಯೂ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಕೆಲವೇ ಕೆಲವು ರಾಜ್ಯಗಳಿಗೆ ವಿಶೇಷ ಯೋಜನೆ ಮಂಜೂರು ಮಾಡಲಾಗಿದೆ. ರಾಜ್ಯಕ್ಕೆ ಹೈದರಾಬಾದ್- ಬೆಂಗಳೂರು ಕಾರಿಡಾರ್ ಯೋಜನೆ ಮಾತ್ರ ಸಿಕ್ಕಿದೆ. ಉಳಿದಂತೆ ಕರ್ನಾಟಕದ ಹೆಸರು ಕೇಳಿ ಬರಲಿಲ್ಲ.

ಆದರೆ ರಾಜ್ಯಕ್ಕೆ ಅನುದಾನ ಪಡೆಯಲು ಯಾವುದೇ ಅಡ್ಡಿ ಇಲ್ಲ. ಸಂಸದರು ಯಾವ ಯೋಜನೆ ಬೇಕೆಂದು ಪ್ರಸ್ತಾವ ಸಲ್ಲಿಸಿ, ಲಾಬಿ ಮಾಡಿದರೆ ವಿಶೇಷ ಅನುದಾನ ತರಬಹುದು. ಜಿಲ್ಲೆಗೆ ಈ ವರ್ಷ ₹2,500 ಕೋಟಿಯಿಂದ ₹3,000 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಬಹುದಾದ ಅವಕಾಶವಿದೆ. ಭದ್ರಾ ಮೇಲ್ದಂಡೆ ಯೋಜನೆ ₹5,300 ಕೋಟಿ ಅನುದಾನ ಬಿಡುಗಡೆಗೆ ಕೇಂದ್ರ ಸಚಿವ ಸಂಪುಟದಲ್ಲಿ ವಿಷಯ ಮಂಡಿಸಬೇಕಾಗಿದೆ. ಸಾಕಾರಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ?

– ಕುಂದರನಹಳ್ಳಿ ರಮೇಶ್, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ

ಉದ್ಯಮಿಗಳ ಪರ ಬಜೆಟ್

ಈ ಬಾರಿ ಮುದ್ರಾ ಸಾಲ ಯೋಜನೆಯಲ್ಲಿ ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಳ ಮಾಡಿರುವುದು, 12 ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆ, ಕೈಗಾರಿಕಾ ಕಾರ್ಮಿಕರಿಗೆ ಡರ್ಮೆಟರಿ ರೀತಿಯ ಬಾಡಿಗೆ ಮನೆ ನಿರ್ಮಾಣಕ್ಕೆ ಆದ್ಯತೆ, ನಗರಗಳ ಅಭಿವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ಸಿಕ್ಕಿದೆ.

ತೆರಿಗೆ ಪದ್ಧತಿ, ಟಿಡಿಎಸ್‌ನಲ್ಲಿ ಮತ್ತಷ್ಟು ಸರಳೀಕರಣ, ತೆರಿಗೆ ವಿವಾದ ತಗ್ಗಿಸಲು ಕ್ರಮ, ಹೂಡಿಕೆದಾರರಿಗೆ ವಿಧಿಸುತ್ತಿದ್ದ ಏಂಜಲ್ ತೆರಿಗೆ ರದ್ದುಪಡಿಸಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ. ಉದ್ಯೋಗ ಸೃಷ್ಟಿ, ಉನ್ನತ ಶಿಕ್ಷಣ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರೈತರು, ಕಾರ್ಮಿಕರು, ಕೈಗಾರಿಕಾ ಉದ್ಯಮಿಗಳು, ವ್ಯಾಪಾರಸ್ಥರ ಪರವಾದ ಬಜೆಟ್.

– ಟಿ.ಜೆ.ಗಿರೀಶ್, ಅಧ್ಯಕ್ಷ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ಆದಾಯ ತೆರಿಗೆ ಮಿತಿ ಹೆಚ್ಚಿಸಬೇಕಿತ್ತು

ಈ ಬಾರಿಯ ಬಜೆಟ್ ಸುಸ್ಥಿರ, ಉತ್ತಮ ಆರ್ಥಿಕತೆಯತ್ತ ಮುನ್ನಡೆಯುವ ಹೆಜ್ಜೆ ಇಟ್ಟಿದೆ. ಹಣಕಾಸು ಕೊರತೆಯನ್ನು ಶೇ 4.9ಕ್ಕೆ ಮಿತಿಗೊಳಿಸಿರುವುದು ಸ್ವಾಗತಾರ್ಹ. ವೈಯಕ್ತಿಕ ಆದಾಯ ತೆರಿಗೆ ಪಾವತಿ ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕಿತ್ತು. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕಿತ್ತು. ಹಣಕಾಸು ಸಚಿವರು ರಾಜ್ಯ ಪ್ರತಿಧಿಸುತ್ತಿದ್ದರೂ ರಾಜ್ಯಕ್ಕೆ ವಿಶೇಷ ಯೋಜನೆಗಳನ್ನು ನೀಡಿಲ್ಲ. ನೀರಾವರಿ ಯೋಜನೆಗಳಿಗೂ ಅನುದಾನ ಕೊಟ್ಟಿಲ್ಲ.

ಯುವಜನತೆ, ಮಹಿಳೆಯರು, ಅನ್ನದಾತರ ಆದ್ಯತೆಯ ಮುಂಗಡ ಪತ್ರ. ನಿರುದ್ಯೋಗ ಕಡಿಮೆ ಮಾಡುವ ಗುರಿ ಹೊಂದಿದ್ದು, ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ, ದೊಡ್ಡ ಕಂಪನಿಗಳಲ್ಲಿ ಯುವಕರಿಗೆ ಮಾಸಿಕ ₹5 ಸಾವಿರ ಶಿಷ್ಯ ವೇತನದೊಂದಿಗೆ ಕೌಶಲಾಭಿವೃದ್ಧಿ, ಸಾವಿರ ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಕೃಷಿ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಸೌಲಭ್ಯ, ಭೂ ದಾಖಲೆಗಳ ಡಿಜಿಟಲೀಕರಣ, ಕ್ಯಾನ್ಸರ್ ಕಾಯಿಲೆಗಳ ಔಷಧಿಗಳಿಗೆ ತೆರಿಗೆ ರದ್ದು, ತೆರಿಗೆ ನೀತಿ ಸರಳೀಕರಣ ಮಾಡಲಾಗಿದೆ.

– ಎಸ್.ಕುಮಾರಸ್ವಾಮಿ, ನಿವೃತ್ತ ಪ್ರಾಂಶುಪಾಲ

ಚಿನ್ನ, ಬೆಳ್ಳಿ ತೆರಿಗೆ ಇಳಿಕೆ

ಚಿನ್ನ, ಬೆಳ್ಳಿ ಮೇಲಿನ ತೆರಿಗೆ ತಗ್ಗಿಸಿ, ಮಹಿಳೆಯರಿಗೆ ಶ್ರಾವಣ ಮಾಸಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ಆದಾಯ ತೆರಿಗೆಯಲ್ಲಿ ಹೆಚ್ಚಿನ ಬದಲಾವಣೆ ಮಾಡದಿರುವುದು ನಿರಾಶೆ ತಂದಿದೆ.

ಸೌರಶಕ್ತಿ ಯೋಜನೆಗೆ ಒತ್ತು ನೀಡಲಾಗಿದೆ. ಸೋಲಾರ್ ಪ್ಯಾನೆಲ್ ಬೆಲೆ ಇಳಿಕೆ ಮಾಡಿರುವುದು ಬಡವರಿಗಷ್ಟೇ ಅಲ್ಲದೆ ಮಧ್ಯಮ ವರ್ಗದವರಿಗೂ ಸಹಕಾರಿಯಾಗಲಿದೆ.

– ಪ್ರೊ.ಟಿ.ಆರ್.ಲೀಲಾವತಿ, ತುಮಕೂರು

ಸರ್ವರಿಗೂ ಆರೋಗ್ಯ ಭರವಸೆ

ದೇಶದ ಆರೋಗ್ಯ ವ್ಯವಸ್ಥೆ ಬಲಪಡಿಸಲು ಅನೇಕ ಯೋಜನೆಗಳನ್ನು ಘೋಷಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಆರೋಗ್ಯ ಕ್ಷೇತ್ರಕ್ಕೆ ₹89,287 ಕೋಟಿ ನಿಗದಿಪಡಿಸಿದ್ದು, 3 ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಿರುವುದು ಮಧ್ಯಮ ವರ್ಗದ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ಎಕ್ಸ್-ರೇ ಟ್ಯೂಬ್‌, ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6ರಷ್ಟು, ಪ್ಲಾಟಿನಂ ಮೇಲೆ ಶೇ 6.4ರಷ್ಟು ತೆರಿಗೆ ಕಡಿಮೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ವಿಸ್ತರಿಸಲಾಗಿದೆ.

– ಡಾ.ಎಸ್.ಪರಮೇಶ್, ತುಮಕೂರು

ದೂರದೃಷ್ಟಿ, ಪ್ರಗತಿಯ ಬಜೆಟ್

ಜನರ ಪ್ರಗತಿಯ ಆಶಯವನ್ನು ಮುಂದಿಟ್ಟುಕೊಂಡು ಮುಂದಿನ 25 ವರ್ಷಗಳ ದೂರದೃಷ್ಟಿಯ ಪ್ರಗತಿದಾಯಕ ಬಜೆಟ್‍ ನೀಡಿದ್ದಾರೆ. ಕೃಷಿ, ಸಾಮಾಜಿಕ ನ್ಯಾಯ, ಉದ್ಯೋಗ, ಉತ್ಪಾದನೆ, ಸೇವಾ ಕ್ಷೇತ್ರ, ನಗರಾಭಿವೃದ್ಧಿ, ಮಹಿಳೆ, ಯುವಕರು, ರೈತರು, ಶಕ್ತಿ ಮೂಲಗಳು, ಸಂಶೋಧನೆ, ಭವಿಷ್ಯ ಸುಧಾರಣೆ ಸೇರಿದಂತೆ ಬಹುಮುಖ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ.

ರೈಲ್ವೆಗೆ ₹2,65,000 ಕೋಟಿ ಮೀಸಲಿಟ್ಟಿದ್ದು, ಅದರಲ್ಲಿ ರೈಲ್ವೆ ಮೇಲ್ಸೇತುವೆ, ಕೆಳಸೇತುವೆಗೆ ₹9,270 ಕೋಟಿ ತೆಗೆದಿರಿಸಲಾಗಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 3 ಕೋಟಿ ಹೆಚ್ಚುವರಿ ಮನೆ ನಿರ್ಮಾಣ, 1 ಕೋಟಿ ನಗರದ ಬಡವರಿಗೆ ಮನೆ ನಿರ್ಮಾಣಕ್ಕೆ ನೆರವು, ಯುವಕರಿಗೆ ಕೌಶಲಾಭಿವೃದ್ಧಿ ಯೋಜನೆ, ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್ ನಿರ್ಮಾಣ, 1 ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್ ಬಳಕೆ, ಶೈಕ್ಷಣಿಕ ಸಾಲ ಯೋಜನೆ, ಉನ್ನತ ಶಿಕ್ಷಣಕ್ಕೆ ₹10 ಲಕ್ಷದವರೆಗೆ ಸಾಲ, ಉದ್ಯೋಗ ಭದ್ರತೆಗೆ ಮೂರು ಹಂತದ ಯೋಜನೆ ರೂಪಿಸಲಾಗಿದೆ. ಇವೆಲ್ಲವೂ ಭವಿಷ್ಯದಲ್ಲಿ ಭಾರತವನ್ನು ಆತ್ಮನಿರ್ಭರದೆಡೆಗೆ ಕೊಂಡೊಯ್ಯುವ ಸಾಧನಗಳಾಗಿವೆ.

– ಜಿ.ಬಿ.ಜ್ಯೋತಿಗಣೇಶ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.