ADVERTISEMENT

ಪೌರಕಾರ್ಮಿಕರಿಗೆ ಪಾವತಿಯಾಗದ ವೇತನ

7 ತಿಂಗಳ ವೇತನ ಬಾಕಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 5:33 IST
Last Updated 25 ಜನವರಿ 2024, 5:33 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ ಇತರರು ಹಾಜರಿದ್ದರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ ಇತರರು ಹಾಜರಿದ್ದರು   

ತುಮಕೂರು: ವೇತನ ಹೆಚ್ಚಳ, ಬಾಕಿ ವೇತನ ಬಿಡುಗಡೆ ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಕಾರ್ಮಿಕರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಬಡವರಿಗೆ ಬದುಕಲು ಅವಕಾಶ ನೀಡುವಂತಹ ನೀತಿಗಳನ್ನು ಜಾರಿಗೆ ತರಬೇಕು. ರೈಲ್ವೆ, ವಿದ್ಯುತ್ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ನಿಲ್ಲಿಸಬೇಕು. ಕಾರ್ಮಿಕರಿಗೆ ₹31 ಸಾವಿರ ಕನಿಷ್ಠ ವೇತನ ನಿಗದಿ ಪಡಿಸಬೇಕು ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ಒತ್ತಾಯಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿಪಡಿಸಬೇಕು. ಪಾಲಿಕೆ, ಆಸ್ಪತ್ರೆ, ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯ ಮಾನ್ಯತೆ ನೀಡುವ ಕಾನೂನು ಜಾರಿಗೆ ತರಬೇಕು. ಕೆಲಸದ ಅವಧಿ ಹೆಚ್ಚಿಸುವ, ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡುವ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಕಳೆದ ವರ್ಷ ಕಾಯಂ ಮಾಡಿದ ಪೌರ ಕಾರ್ಮಿಕರಿಗೆ 7 ತಿಂಗಳಿನಿಂದ ಸಂಬಳ ನೀಡಿಲ್ಲ. ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ವೇತನ ಪಾವತಿ ಮಾಡಬೇಕು. ಜಿಲ್ಲೆಯ ಕಾರ್ಮಿಕರ ಕಷ್ಟಗಳನ್ನು ಆಲಿಸಲು ಒಂದು ಸಭೆ ನಡೆಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮನವಿ ಸ್ವೀಕರಿಸಿ ಮಾತನಾಡಿ, ‘ಕಾಯಂ ಕಾರ್ಮಿಕರ ಸಂಬಳ ಪಾವತಿಗೆ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸಿಐಟಿಯು ಜಿಲ್ಲಾ ಖಚಾಂಚಿ ಎ.ಲೋಕೆಶ್‌, ಪೌರ ಕಾರ್ಮಿಕರ ಸಂಘ ಮಂಜುನಾಥ್‌, ವಿವಿಧ ಸಂಘಗಳ ಪದಾಧಿಕಾರಿಗಳಾದ ನಾಗೇಶ್‌, ರಘು ಬಿಳಿಗೆರೆ, ಕುಮಾರ್, ಮಾರುತಿ, ಮಂಜುನಾಥ್, ಶಿವಕುಮಾರ್‌ಸ್ವಾಮಿ, ಹುಚ್ಚೇಗೌಡ, ದೀಲಿಪ್, ಮುತ್ತುರಾಜ್, ಟಿ.ಆರ್.ಕಲ್ಪನಾ, ರಾಜು ವೆಂಕಟಪ್ಪ, ಟಿ.ಜಿ.ಶಿವಲಿಂಗಯ್ಯ, ಪಂಚಾಕ್ಷರಿ, ಶಂಕರಪ್ಪ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.