ADVERTISEMENT

ಉಪಲೋಕಾಯುಕ್ತ ಭೇಟಿ: ಜಿಲ್ಲಾ ಆಡಳಿತ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 5:59 IST
Last Updated 15 ಅಕ್ಟೋಬರ್ 2024, 5:59 IST
ಕರ್ನಾಟಕ ಲೋಕಾಯುಕ್ತ
ಕರ್ನಾಟಕ ಲೋಕಾಯುಕ್ತ   

ತುಮಕೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅ. 18, 19 ಹಾಗೂ 20ರಂದು ಮೂರು ದಿನಗಳ ಕಾಲ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಸಾರ್ವಜನಿಕರಿಂದ ಕುಂದು ಕೊರತೆ ಸ್ವೀಕಾರ, ದೂರು ವಿಚಾರಣೆ, ಪ್ರಕರಣಗಳ ವಿಲೇವಾರಿ ಸಭೆ, ಲೋಕಾಯುಕ್ತ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ, ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆಯ ಪಾತ್ರ, ಜಿಲ್ಲೆಯಲ್ಲಿ ಬಾಕಿ ಇರುವ ಲೋಕಾಯುಕ್ತ ದೂರುಗಳ ವಿಚಾರಣೆ ನಡೆಸಲಿದ್ದಾರೆ.

ಉಪ ಲೋಕಾಯುಕ್ತರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಅಗತ್ಯ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದೆ. ಅಧಿಕಾರಿಗಳೊಂದಿಗೆ ಸೋಮವಾರ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಈವರೆಗೆ ನೋಂದಣಿಯಾಗಿರುವ ದೂರು ಪ್ರಕರಣಗಳ ಮಾಹಿತಿ ಪಡೆದುಕೊಂಡರು. ಅಗತ್ಯ ಮಾಹಿತಿ, ದಾಖಲೆಗಳೊಂದಿಗೆ ಸಭೆಗೆ ಹಾಜರಾಗಬೇಕು ಎಂದು ನಿರ್ದೇಶಿಸಿದರು.

ADVERTISEMENT

ಲೋಕಾಯುಕ್ತ ಪ್ರಕರಣದ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿದ್ದರೆ ಸೂಕ್ತ ಕಾರಣವನ್ನು ಉಪ ಲೋಕಾಯುಕ್ತರ ಗಮನಕ್ಕೆ ತರಬೇಕು. ದೂರು ಅರ್ಜಿಗಳು ಬಾಕಿ ಉಳಿದಿದ್ದರೆ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 49, ಕಂದಾಯ ಇಲಾಖೆಯ 20, ನಗರಾಭಿವೃದ್ಧಿ ಕೋಶದ 12, ಆರೋಗ್ಯ ಇಲಾಖೆ 1, ನಿರ್ಮಿತಿ ಕೇಂದ್ರದ 1 ದೂರು ಅರ್ಜಿ ಬಾಕಿ ಇದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

18ಕ್ಕೆ ವಿಚಾರಣೆ

ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅ. 18ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಅಹವಾಲು ಕುಂದು-ಕೊರತೆ ಸ್ವೀಕಾರ ದೂರುಗಳ ವಿಚಾರಣೆ ನಡೆಸಲಿದ್ದಾರೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸಹ ಭಾಗವಹಿಸುವರು. ಶುಕ್ರವಾರ ಸಂಜೆ 5.30ರಿಂದ 6.30 ಗಂಟೆ ವರೆಗೆ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆ ಪಾತ್ರ ಮತ್ತು ಲೋಕಾಯುಕ್ತ ಕಾಯ್ದೆ 1984ರ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅ. 19ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ಜಿಲ್ಲೆಯಲ್ಲಿ ಬಾಕಿ ಇರುವ ದೂರುಗಳ ವಿಚಾರಣೆ ಪ್ರಕರಣಗಳ ವಿಲೇವಾರಿ ಸಭೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.