ತಿಪಟೂರು: ಲೋಕಸೇವಾ ಆಯೋಗ (ಯುಪಿಎಸ್‍ಸಿ) ಈ ಬಾರಿ ನಡೆಸಿದ ಪರೀಕ್ಷೆಯಲ್ಲಿ ತಾಲ್ಲೂಕಿನ ಗ್ರಾಮೀಣ ಹಿನ್ನೆಲೆಯ ಇಬ್ಬರು ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಇದೇ ತಾಲ್ಲೂಕಿನ ಹುಚ್ಚಗೊಂಡನಹಳ್ಳಿ ಬಸವಲಿಂಗಯ್ಯ ಮತ್ತು ಶಶಿಕಲಾ ದಂಪತಿ ಪುತ್ರ ಎಚ್.ಬಿ. ವಿವೇಕ್ 257ನೇ ಗಳಿಸಿದ್ದರೆ, ನಗರದ ಕಲ್ಪತರು ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ದಿ. ಬೆಟ್ಟೇಗೌಡ ಹಾಗೂತುಮಕೂರಿನ ಚೇತನಾ ವಿದ್ಯಾಮಂದಿರದ ಕನ್ನಡ ಶಿಕ್ಷಕಿ ಪ್ರಭಾ ಅವರ ಪುತ್ರ. ಡಾ.ಬಿ.ನಾಗಾರ್ಜುನಗೌಡ 418ನೇ ಸ್ಥಾನ ಪಡೆದಿದ್ದಾರೆ.
ಎಚ್.ಬಿ. ವಿವೇಕ್ ಅಪ್ಪಟ ಕೃಷಿಕ ಕುಟುಂಬದಲ್ಲಿ ಬೆಳೆದವರು. ಎಂಟು ವರ್ಷದ ಹಿಂದೆ ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದ್ದರು. ಮೂರು ವರ್ಷ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಯುಪಿಎಸ್‍ಸಿ ತೇರ್ಗಡೆ ಹೊಂದಬೇಕೆಂಬ ಹಠದಿಂದ ಐದು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದ ಇವರು ಐದನೇ ಪ್ರಯತ್ನದಲ್ಲಿ 257ನೇ ರ್‍ಯಾಂಕ್ ಗಳಿಸಿದ್ದಾರೆ. ಐಪಿಎಸ್ ಗ್ರೇಡ್ ಸಿಗುವುದು ಖಚಿತವಾಗಿದ್ದು, ಅದಕ್ಕೆ ಸೇರಿಯೇ ಮತ್ತೊಮ್ಮೆ ಐಎಎಸ್ ದರ್ಜೆಗಾಗಿ ಪರೀಕ್ಷೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ.
ಎಚ್.ಬಿ. ವಿವೇಕ್ ಬಾಲ್ಯವನ್ನು ಹುಟ್ಟೂರು ಹುಚ್ಚಗೊಂಡನಹಳ್ಳಿಯಲ್ಲಿ ಕಳೆದವರು. ಒಟ್ಟು ಕುಟುಂಬದ ಆಸ್ತಿ ತುಂಬಾ ಕಡಿಮೆ. ಹಾಗಾಗಿ ಇವರ ತಂದೆ ಬಸವಲಿಂಗಯ್ಯ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರದ ಕೆಲಸ ನೆಚ್ಚಿಕೊಂಡಿದ್ದರು. ನಗರದ ನಳಂದ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ ವಿವೇಕ್ ಕಲ್ಪತರು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದರು. ನಂತರ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಬಿಇ (ಕಂಪ್ಯೂಟರ್ ಸೈನ್ಸ್) ಮುಗಿಸಿದ್ದರು. ನಂತರ ಯುಪಿಎಸ್‍ಸಿ ಪರೀಕ್ಷೆ ಬರೆಯಲು ಆಸಕ್ತಿ ತೋರಿದರು.
ಸಿಕ್ಕಿದ್ದ ಎಂಜಿನಿಯರಿಂಗ್ ಕೆಲಸ ಬೇಸರವಾಗಿ ಯುಪಿಎಸ್‍ಸಿ ಸಾಧನೆ ಸೆಳೆದಾಗ ಅವರ ಗೆಳೆಯರ ಆರ್ಥಿಕ ಸಹಕಾರ ಪಡೆದು ಸತತ ಐದು ಪ್ರಯತ್ನಗಳ ನಂತರ ಯಶಸ್ಸು ಸಾಧಿಸಿದ್ದಾರೆ.
ಇನ್ನು ಕಲ್ಪತರು ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಬಹಳ ಖ್ಯಾತರಾಗಿದ್ದವರು ಹಾಗೂ ಶಿಸ್ತು ಮತ್ತು ಸರಳತೆಯ ವ್ಯಕ್ತಿ ದಿ.ಬೆಟ್ಟೇಗೌಡರು. ಅವರ ಪುತ್ರ ಡಾ. ನಾಗಾರ್ಜುನಗೌಡ ಅವರು ಮಂಡ್ಯದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪೂರೈಸಿ ಅಲ್ಲಿಯೇ ವೈದ್ಯ ವೃತ್ತಿ ಮಾಡುತ್ತಿದ್ದರು. ವೃತ್ತಿ ನಡುವೆಯೇ ಯುಪಿಎಸ್‍ಸಿ ಪರೀಕ್ಷೆ ಬರೆದು ಎರಡನೇ ಪ್ರಯತ್ನದಲ್ಲಿ 418ನೇ ಸ್ಥಾನ ಗಳಿಸಿದ್ದಾರೆ. ಐಪಿಎಸ್ ಅಥವಾ ಐಎಎಸ್ ಗ್ರೇಡ್ ಸಿಗುವ ಆಶಾ ಭಾವದಲ್ಲಿದ್ದಾರೆ.
ಗೊರಗೊಂಡನಹಳ್ಳಿಯ ನಿವಾಸಿಯಾಗಿದ್ದ ದಿ. ಬೆಟ್ಟೇಗೌಡ ಕೂಡ ಗ್ರಾಮೀಣ ಹಿನ್ನೆಲೆಯವರು. ಕಲ್ಪತರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುವಲ್ಲಿ ಹೆಸರಾದವರು. ಇವರ ಪುತ್ರ ನಾಗಾರ್ಜುನ ಗೌಡ ಡೆಫೊಡೆಲ್ಸ್, ಸ್ಟೆಲ್ಲಾ ಮೇರೀಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಲ್ಪತರು ಸೆಂಟ್ರಲ್ ಶಾಲೆಯಲ್ಲಿ 9ನೇ ತರಗತಿವರೆಗೆ ಓದಿನ ನಂತರ ಹತ್ತನೇ ತರಗತಿಗೆ ತುಮಕೂರು ಚೇತನ ಶಾಲೆಗೆ ಸೇರಿದ್ದರು. ಅಲ್ಲಿನ ಸರ್ವೋದಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ವೈದ್ಯಕೀಯ ಶಿಕ್ಷಣ ಪೂರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.