ತಿಪಟೂರು: ದಲಿತರಿಗೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಶಾಸಕ ಕೆ.ಷಡಕ್ಷರಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆ ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲ್ಲೂಕಿನಲ್ಲಿ ಅಧಿಕಾರಿಗಳು ದಲಿತರು ಬಡವರಿಗೆ ಮೂಲಸೌಕರ್ಯ ದೊರಕಿಸಲು ಆದ್ಯತೆ ನೀಡಬೇಕು. ತಾಲ್ಲೂಕಿನಲ್ಲಿ ಎಲ್ಲಾ ಗ್ರಾಮಗಳಲೂ ಸಾರ್ವಜನಿಕ ಸ್ಮಶಾನ ದೊರೆಯುವಂತೆ ಮಾಡಬೇಕು ಎಂದರು.
ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಸಾವಿರಾರು ಜನರ ಬಗರು ಹುಕುಂ ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ಕೂಡಲೇ ಸರ್ಕಾರದ ನಿರ್ದೇಶನದಂತೆ ಬಗರ್ ಹುಕುಂ ಸಮಿತಿ ರಚಿಸಿ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಣೆ ಮಾಡಲಾಗುವುದು. ತಾಲ್ಲೂಕಿನ ಚೌಡಾಪುರ ಹಾಗೂ ಹಾಲ್ಕುರ್ಕೆಯಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ಕಾನೂನು ಸಮಸ್ಯೆ ಉಂಟಾಗಿ ಸಾಗುವಳಿದಾರರಿಗೆ ತೊಂದರೆಯಾಗಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೆ ನಡೆಸಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಚೌಡ್ಲಾಪುರ ಹಾಗೂ ಹಾಲ್ಕುರಿಕೆಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನ ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಹೊರಟಿರುವುದು ಖಂಡನೀಯ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಾಗತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಹಾದು ಹೋಗಿರುವ ಎತ್ತಿನಹೊಳೆ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಹಲವಾರು ಗ್ರಾಮಗಳಲ್ಲಿ ದಲಿತರ ಭೂಮಿ ವಶಪಡಿಸಿಕೊಂಡಿದ್ದು ಭೂಮಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದರು.
ಮುಖಂಡ ಬಜಗೂರು ಮಂಜುನಾಥ್ ಮಾತನಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಕಾಯ್ದಿರಿಸಿರುವ ಬಗ್ಗೆ ಸುಳ್ಳು ವರದಿ ನೀಡಲಾಗುತ್ತಿದೆ. ಸರ್ಕಾರಿ ದಾಖಲೆಯಲ್ಲಿ ಮಾತ್ರ ಸ್ಮಶಾನಗಳಿದ್ದು ಬಹುತೇಕ ಸ್ಮಶಾನ ಒತ್ತುವರಿಯಾಗಿವೆ. ಕೂಡಲೇ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಜಂಟಿಯಾಗಿ ಸರ್ವೆ ಮಾಡಿ ಸ್ಮಶಾನ ಹಸ್ತಾಂತರಿಸಬೇಕು ಎಂದರು.
ಕೊಪ್ಪ ಶಾಂತಪ್ಪ ಮಾತನಾಡಿ, ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಮೀಸಲು ಹಣ ದುರುಪಯೋಗವಾಗಿದ್ದು ಕೂಡಲೇ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಪವನ್ ಕುಮಾರ್, ಇಒ ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಮುಖಂಡ ಗಾಂಧಿನಗರ ಬಸವರಾಜು, ಕುಪ್ಪಾಳ ರಂಗಸ್ವಾಮಿ, ಯಗಚಿಕಟ್ಟೆ ರಾಘವೇಂದ್ರ, ವೆಂಕಟೇಶ್, ಪೆದ್ದಿಹಳ್ಳಿ ನರಸಿಂಹಯ್ಯ, ವೆಂಕಟೇಶ್, ಜಯಸಿಂಹ, ಸಿದ್ದಯ್ಯ, ಚಂದ್ರಶೇಖರ್ ಜಗದಾರ್ಯ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.