ADVERTISEMENT

ಹುಳಿಯಾರು: ದುರ್ಗಾಪರಮೇಶ್ವರಿ ಬ್ರಹ್ಮರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 11:15 IST
Last Updated 26 ಏಪ್ರಿಲ್ 2019, 11:15 IST
ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬ್ರಹ್ಮ ರಥೋತ್ಸವ ನಡೆಯಿತು
ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬ್ರಹ್ಮ ರಥೋತ್ಸವ ನಡೆಯಿತು   

ಹುಳಿಯಾರು: ಪಟ್ಟಣದ ದುರ್ಗಾಪರಮೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಶುಕ್ರವಾರ ಮಧ್ಯಾಹ್ನ ಭಕ್ತರ ಹರ್ಷೋದ್ಘಾರದೊಂದಿಗೆ ವೈಭವಯುತವಾಗಿ ಜರುಗಿತು.

ಬ್ರಹ್ಮರಥೋತ್ಸವದ ಅಂಗವಾಗಿ ಮುಂಜಾನೆ ರಥಕ್ಕೆ ಪುಣ್ಯಾಹ, ದಿಗ್ಬಲಿ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಲಾಯಿತು. ನಂತರ ರಥವನ್ನು ವಿವಿಧ ಹೂ, ಹಾರ, ಬಣ್ಣಬಣ್ಣದ ಬಾವುಟದಿಂದ ಅಲಂಕರಿಸಲಾಗಿತ್ತು. ದೇಗುಲದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ನೇರವೇರಿದ ನಂತರ ಮಧ್ಯಾಹ್ನ 2 ಗಂಟೆ ವೇಳೆಗೆ ಸರ್ವಾಲಂಕೃತ ದುರ್ಗಾಪರಮೇಶ್ವರಿ ಅಮ್ಮನವರನ್ನು ದೇಗುಲದ ಆವರಣಕ್ಕೆ ಬರಮಾಡಿಕೊಳ್ಳಲಾಯಿತು.

ಜತೆಯಲ್ಲಿ ಹುಳಿಯಾರಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ಹೊಸಹಳ್ಳಿಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆ ದುರ್ಗಮ್ಮ ದೇವರುಗಳನ್ನು ಮೆರವಣಿಗೆಯಲ್ಲಿ ರಥದ ಬಳಿ ತರಲಾಯಿತು. ನಂತರ ಸಾವಿರಾರು ಭಕ್ತರ ಉದ್ಘೋಷದೊಂದಿಗೆ ಅಮ್ಮನವರನ್ನು ರಥದಲ್ಲಿ ಕುಳ್ಳಿರಿಸಿ ತೇರನ್ನು ಭಕ್ತರು ಎಳೆದರು.

ADVERTISEMENT

ಕೆಲವರು ತೇರಿಗೆ ಬಾಳೆಹಣ್ಣು ಎಸೆಯಲು ಮುಂದಾದರೆ ಮತ್ತೆ ಕೆಲವರು ಕಳಸದ ತುದಿಯಲ್ಲಿದ್ದ ನಿಂಬೆಹಣ್ಣನ್ನು ಕೆಡವಲು ಗುರಿಯಿಟ್ಟರು. ರಥೋತ್ಸವದ ನಂತರ ಪಟ್ಟಣದ ವಿವಿಧ ಸಮುದಾಯಗಳ ಸೇವಾರ್ಥದಲ್ಲಿ ಪಾನಕ ಪನಿವಾರ ವಿತರಣೆ ಮಾಡಲಾಯಿತು.

ಸೀತಾರಾಮ ಕಲ್ಯಾಣ ಮಂದಿರದಲ್ಲಿ ವಿಪ್ರ ಸಂಘದಿಂದ ದಾಸೋಹ ಹಾಗೂ ದೇವಾಲಯ ಸಮಿತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ದೇಗುಲ ಸಮಿತಿ ಧರ್ಮದರ್ಶಿ ಎಚ್.ಶಿವಕುಮಾರ್, ಸಂಚಾಲಕ ಎಚ್.ಕೆ.ವಿಶ್ವನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.