ADVERTISEMENT

ಮಾಧುಸ್ವಾಮಿ ನೀಚ ಬುದ್ಧಿ ಬಿಡಲಿ: ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 23:49 IST
Last Updated 4 ಜೂನ್ 2024, 23:49 IST
ವಿ.ಸೋಮಣ್ಣ
ವಿ.ಸೋಮಣ್ಣ   

ತುಮಕೂರು: ‘ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಇನ್ನು ಮುಂದಾದರೂ ನೀಚ ಬುದ್ಧಿ ಬಿಡಲಿ’ ಎಂದು ನೂತನ ಸಂಸದ ವಿ.ಸೋಮಣ್ಣ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಲೋಕಸಭೆ ಟಿಕೆಟ್‌ ಘೋಷಣೆಯಾದ ನಂತರ ಅವರನ್ನು ಭೇಟಿಯಾಗಿ ಸುಮಾರು ಎರಡು ತಾಸು ಚರ್ಚಿಸಿದೆ. ತಾತ್ಸಾರದಿಂದಲೇ ಕಂಡರು. ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಇನ್ನು ಮುಂದಾದರೂ ತಿದ್ದಿಕೊಂಡು ನಡೆಯಲಿ’ ಎಂದರು.

‘ಗೋವಿಂದರಾಜ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನ ಕೆಲಸ ನೋಡಿ ಜಿಲ್ಲೆಯ ಮತದಾರರು ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕಡೆ ಸೋತರೂ ಮತ್ತೊಮ್ಮೆ ಸ್ಪರ್ಧಿಸಲು ಹೈಕಮಾಂಡ್‌ ನಾಯಕರು ಅವಕಾಶ ಕಲ್ಪಿಸಿದರು‘ ಎಂದರು.

ADVERTISEMENT

‘ಹೊರಗಿನ ಅಭ್ಯರ್ಥಿ ಎಂದು ಪದೇ ಪದೇ ಹೇಳುವ ಮೂಲಕ ನನ್ನನ್ನು ಎಚ್ಚರಿಸುವ ಕೆಲಸ ಮಾಡಿದರು. ಇದನ್ನೇ ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ ಎಲ್ಲೆಡೆ ಪ್ರಚಾರ ಮಾಡಲಾಯಿತು‘ ಎಂದರು.

ಗೌಡರಿಂದ ನನ್ನ ಗೆಲುವು: ಸೋಮಣ್ಣ
‘ಪ್ರಧಾನಿ ನರೇಂದ್ರ ಮೋದಿ ಅಮಿತ್‌ ಶಾ ಜೆಡಿಎಸ್‌ ವರಿಷ್ಠ ದೇವೇಗೌಡ ಅವರಿಂದ ನನ್ನ ಈ ಗೆಲವು ಸಾಧ್ಯವಾಗಿದೆ. ಮಾಜಿ ಸಂಸದ ಜಿ.ಎಸ್‌.ಬಸವರಾಜು ಮಾರ್ಗದರ್ಶನ ಕೈ ಹಿಡಿಯಿತು’ ಎಂದು ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ. ‘ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾಗಲಿ ಎಂಬುವುದು ನನ್ನ ಬಯಕೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.