ತುಮಕೂರು: ಈಡಿಗ ಸಮುದಾಯದವರು ಮದ್ಯದಂಗಡಿ ಅವಲಂಬಿಸಿ ಜೀವನ ಸಾಗಿಸುತ್ತಾರೆಂದು ಕತ್ತಲೆ ಕೋಣೆಯಲ್ಲಿ ಇಡುವ ಕೆಲಸ ಮಾಡಲಾಗಿತ್ತು. ಇದೀಗ ಬದಲಾವಣೆಯ ಪರ್ವ ಆರಂಭವಾಗಿದ್ದು, ಶೇ 80ರಷ್ಟು ಮಂದಿ ಇತರೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾ ಆರ್ಯ ಈಡಿಗರ ಸಂಘ, ನಾರಾಯಣ ಗುರು ಜಯಂತ್ಯುತ್ಸವ ಸಮಿತಿ, ನಾರಾಯಣ ಗುರು ಸಮಾಜ ಟ್ರಸ್ಟ್, ಜೆ.ಪಿ.ನಾರಾಯಣ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಡಿಗ ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದ್ದರೂ ಒಗ್ಗಟ್ಟು ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತರಾಗಬೇಕು. ಸಮುದಾಯದವರು ಸ್ವಾಭಿಮಾನಿಗಳು, ತಮ್ಮ ದುಡಿಮೆಯಲ್ಲಿ ಬೇರೆಯವರಿಗೆ ಉಣಬಡಿಸುವ ಜನ. ಇಡೀ ಸಮಾಜಕ್ಕೆ ಶಕ್ತಿ ತುಂಬುವ ಸಮುದಾಯ ಎಂದು ಅಭಿಪ್ರಾಯಪಟ್ಟರು.
ನಾರಾಯಣ ಗುರು ಧ್ವನಿ ಇಲ್ಲದ, ಆಸರೆ ಸಿಗದ ಸಮುದಾಯದ ಪರ ಧ್ವನಿ ಎತ್ತಿದ್ದರು. ಸಮಾಜದ ಜಾಗೃತಿಗೆ ದುಡಿದರು. ಅಸಮಾನತೆ ತೊಲಗಿಸಲು ಹೋರಾಡಿದರು. ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ವಿದ್ಯಾವಂತರನ್ನಾಗಿ ರೂಪಿಸಬೇಕು ಎಂದು ಸಲಹೆ ಮಾಡಿದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ‘ಶೂದ್ರರು ಓಂ ನಮಃ ಶಿವಾಯ ಎಂದು ಉಚ್ಚಾರ ಮಾಡಿದರೆ ಮೇಲ್ವರ್ಗದವರು ಅವರ ನಾಲಿಗೆ ಕತ್ತರಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ನಾರಾಯಣ ಗುರು ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಕಟ್ಟುಪಾಡು, ಕಂದಾಚಾರ, ಮೂಢನಂಬಿಕೆ ವಿರುದ್ಧ ನಿಂತಿದ್ದರು. ಆದರೆ, ಇಂದಿಗೂ ಈ ಆಚರಣೆ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ’ ಎಂದು ವಿಷಾದಿಸಿದರು.
ಈಗಲೂ ದುರ್ಬಲ ವರ್ಗದ ಜನರಿಗೆ ದೇಗುಲಕ್ಕೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅವರಿಗೆ ಪುರಿ ಜಗನ್ನಾಥ ದೇವಾಲಯದ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಜಾತಿ, ಧರ್ಮದ ಆಚರಣೆ ನೋಡಿದಾಗ ಹೆದರಿಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತೀರ್ಥಹಳ್ಳಿಯ ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ, ನಾರಾಯಣ ಗುರು ಸಮಾಜ ಟ್ರಸ್ಟ್ ಅಧ್ಯಕ್ಷ ಮಾದವನ್, ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಆರ್ಯ ಈಡಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾಗರಾಜ್, ಜೆಪಿಎನ್‌ಪಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್, ಮುಖಂಡರಾದ ಕೆ.ವಿ.ಅಜಯ್‌ಕುಮಾರ್, ಎಚ್.ಮಹದೇವ್, ಲಕ್ಷ್ಮಿನರಸಿಂಹಯ್ಯ, ರಾಮಕೃಷ್ಣಪ್ಪ, ದೇವೇಂದ್ರಪ್ಪ, ಎಂ.ಎನ್.ನರಸಿಂಹಮೂರ್ತಿ ಮೊದಲಾದವರು ಹಾಜರಿದ್ದರು.
‘ನಾರಾಯಣಗುರು ಸಿದ್ಧಾಂತ ಸಾರ್ವಕಾಲಿಕ. ಅವರ ಸಂದೇಶ ಯಾರನ್ನೂ ನೋಯಿಸುವುದಿಲ್ಲ. ದೇವಸ್ಥಾನ ಪ್ರತಿಷ್ಠಾಪಿಸಿ ಎಲ್ಲರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರು. ತಳ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರಲು ಶ್ರಮಿಸಿದರು’ ಎಂದು ಸೋಲೂರಿನ ಆರ್ಯ ಈಡಿಗರ ಸಂಸ್ಥಾನ ಮಠದ ವಿಖ್ಯಾತನಂದ ಸ್ವಾಮೀಜಿ ಹೇಳಿದರು.
ನಾರಾಯಣ ಗುರು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಿವಣ್ಣ ಮಲ್ಲಸಂದ್ರ, ‘ಸುಮಾರು ₹5 ಕೋಟಿಯಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಮುಂದಿನ ತಿಂಗಳು ಶಂಕು ಸ್ಥಾಪನೆ ನೆರವೇರಿಸಲಾಗುವುದು. ಭವನ ಪೂರ್ಣಗೊಂಡ ನಂತರ ಸಾಮೂಹಿಕ ವಿವಾಹ, ನಾರಾಯಣ ಗುರು ಜಯಂತಿ ಆಚರಿಸಲಾಗುವುದು’ ಎಂದು ಮಾಹಿತಿ ನೀಡಿದರು.
ನಾರಾಯಣ ಗುರು ಜಯಂತ್ಯುತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖಂಡ ಎಚ್.ಎಂ.ಮಾಧು ಸಾಹುಕಾರ್, ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ, ತುರುವೇಕೆರೆ ಘಟಕದ ಅಧ್ಯಕ್ಷ ಎನ್.ರಾಜಣ್ಣ, ಕರಾಟೆ ಗುರು ಕೃಷ್ಣಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್ (ಧನಿಯಾಕುಮಾರ್ ಪರವಾಗಿ ಸ್ವೀಕಾರ), ಮುಖಂಡ ಟಿ.ಕೆ.ರವಿ, ಇಟ್ಟಿಗೆ ಕಾರ್ಖಾನೆ ಮಾಲೀಕ ನ್ಯಾತೇಗೌಡ, ಮಾಜಿ ಸೈನಿಕ ಪಿ.ಎಂ.ಸಂತೋಷ್ ಕುಮಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಯಂತಿ ಅಂಗವಾಗಿ ಉತ್ಸವ ಏರ್ಪಡಿಸಲಾಗಿತ್ತು. ಅಲಂಕೃತ ವಾಹನದಲ್ಲಿ ನಾರಾಯಣ ಗುರು ವಿಗ್ರಹದ ಮೆರವಣಿಗೆ ನಡೆಯಿತು. ನಗರದ ಬಿಜಿಎಸ್ ವೃತ್ತದಿಂದ ಆರಂಭವಾಗಿ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದವರೆಗೆ ಸಾಗಿತು.
ಶಾಸಕ ವಿ.ಸುನೀಲ್‌ಕುಮಾರ್ ಉತ್ಸವಕ್ಕೆ ಚಾಲನೆ ನೀಡಿದರು. ಪಟ ಕುಣಿತ, ನಂದಿ ಧ್ವಜ ಸೇರಿ ವಿವಿಧ ಜಾನಪದ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದವು. ಪೂರ್ಣಕುಂಭ, ಕಳಸದೊಂದಿಗೆ ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.