ADVERTISEMENT

ಲಸಿಕೆ ಪಡೆಯದಿದ್ದರೆ ಕಾಲೇಜು ಪ್ರವೇಶ ಇಲ್ಲ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 5:40 IST
Last Updated 30 ನವೆಂಬರ್ 2021, 5:40 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ತುಮಕೂರು: ಕೋವಿಡ್ ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಪ್ರವೇಶ ನೀಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್ ನಿಯಂತ್ರಣ ಸಂಬಂಧ ಸೋಮವಾರ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ‘ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಲಸಿಕೆ ಪಡೆಯುವುದು ಕಡ್ಡಾಯ. ಕನಿಷ್ಠ ಒಂದು ಡೋಸ್ ಪಡೆಯದಿದ್ದರೆ ಪ್ರವೇಶ ನೀಡುವಂತಿಲ್ಲ. ವಿದ್ಯಾರ್ಥಿಗಳು ಲಸಿಕೆ ಪಡೆಯದೆ ಕಾಲೇಜುಗಳಲ್ಲಿ ಕೋವಿಡ್ ಹೆಚ್ಚಳವಾದರೆ ಸಂಬಂಧಿಸಿದ ಪ್ರಾಚಾರ್ಯರು, ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ವಿವಿಧೆಡೆ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ, ಮಹಾರಾಷ್ಟ್ರದಿಂದ ಕಳೆದ ಒಂದು ತಿಂಗಳ ಹಿಂದೆ ಜಿಲ್ಲೆಗೆ ಬಂದಿರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಸೋಂಕು ಹರಡುವುದನ್ನು ತಡೆಯಲು ಪದವಿ, ಎಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಸೋಂಕು ಹೆಚ್ಚಳವಾದ ಕಡೆ ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಎರಡು ಡೋಸ್ ಕಡ್ಡಾಯ: ಸರ್ಕಾರಿ ಕಚೇರಿ, ಮಾಲ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್, ಸಾರ್ವಜನಿಕ ಗ್ರಂಥಾಲಯ, ವ್ಯಾಪಾರ-ವಹಿವಾಟು ಮಳಿಗೆ, ಅಂಗಡಿ, ಮುಂಗಟ್ಟು, ಖಾಸಗಿ ಕಂಪನಿ, ಶಾಲಾ, ಕಾಲೇಜು ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವವರು ಎರಡನೇ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ. ಎರಡೂ ಡೋಸ್ ಲಸಿಕೆ ಪಡೆಯದಿದ್ದರೆ ಅಂತಹವರು ಕೆಲಸ ನಿರ್ವಹಿಸಲು ಅನುಮತಿ ನೀಡುವಂತಿಲ್ಲ ಎಂದು ತಿಳಿಸಿದರು.

ಪರವಾನಗಿ ರದ್ದು: ವ್ಯಾಪಾರ– ವಹಿವಾಟು ನಡೆಸುವ ವ್ಯಾಪಾರಸ್ಥರು ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದಿದ್ದರೆ ಅಂತಹ ವ್ಯಾಪಾರಸ್ಥರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಲಸಿಕಾ ಮೇಳ: ಜಿಲ್ಲೆಯಲ್ಲಿ ಮಂಗಳವಾರ, ಬುಧವಾರ, ಗುರುವಾರ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಶೇ 91ರಷ್ಟು ಮೊದಲ ಡೋಸ್, ಶೇ 63ರಷ್ಟು ಎರಡನೇ ಡೋಸ್ ಲಸಿಕೆ ಹಾಕಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.