ADVERTISEMENT

ವಾಲ್ಮೀಕಿ ನಿಗಮ ಹಗರಣ: ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 6:12 IST
Last Updated 2 ಜೂನ್ 2024, 6:12 IST
ಎನ್.ರವಿಕುಮಾರ್
ಎನ್.ರವಿಕುಮಾರ್   

ತುಮಕೂರು: ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಸರ್ಕಾರ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಇಲ್ಲಿ ಶನಿವಾರ ಆಗ್ರಹಿಸಿದರು.

ಸರ್ಕಾರ ಬ್ಯಾಂಕ್‌ ಮೂಲಕವೇ ನಮ್ಮ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಣ ಕಳುಹಿಸಿದೆ. ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದೆ. ₹87 ಕೋಟಿ ಹಣವನ್ನು ಹೈದರಾಬಾದ್‌ನ ವಿವಿಧ ಐ.ಟಿ ಕಂಪನಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈ ಹಣವನ್ನು ಅಲ್ಲಿನ ಚುನಾವಣೆ ನಿರ್ವಹಣೆ, ಖರ್ಚಿಗೆ ಬಳಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯದಿಂದ ಬೇರೆ ರಾಜ್ಯಕ್ಕೆ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ರಾಜ್ಯದ ಹಣ ಕಾಂಗ್ರೆಸ್‌ಗೂ ಹೋಗಿರಬಹುದು. ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಲು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಖ್ಯಮಂತ್ರಿ ಮೂಗಿನ ನೇರದಲ್ಲೇ ನಡೆದ ಹಗರಣದ ಬಗ್ಗೆ ಮಾಹಿತಿ ಇಲ್ಲ ಎಂದರೆ ಅವರು ಅಧಿಕಾರದಲ್ಲಿ ಇರಲು ಯಾವುದೇ ನೈತಿಕತೆ ಇಲ್ಲ. ಸತ್ಯಹರಿಶ್ಚಂದ್ರನ ಎರಡನೇ ಅವತಾರದಂತೆ ಮಾತನಾಡುತ್ತಿರುವ ಸಿದ್ದರಾಮಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ನಾಗೇಂದ್ರ ಕೂಡಲೇ ರಾಜೀನಾಮೆ ಕೊಡಬೇಕು ಎಂದರು.

ಸರ್ಕಾರಕ್ಕೆ ಜೂನ್‌ 6ರ ವರೆಗೆ ಗಡುವು ನೀಡಲಾಗಿದೆ. ಇದಕ್ಕೊಂದು ಅಂತ್ಯ ಹಾಡಬೇಕು. ಇಲ್ಲದಿದ್ದರೆ ಲೋಕಸಭಾ, ವಿಧಾನ ಪರಿಷತ್ತಿನ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯಿಂದ ರಾಜ್ಯದಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 53ರಷ್ಟು ಫಲಿತಾಂಶ ಬಂದಿದೆ. ಜನ ಸರ್ಕಾರವನ್ನು ತಿರಸ್ಕಾರದಿಂದ ನೋಡುತ್ತಾರೆ ಎಂಬ ಕಾರಣಕ್ಕೆ ಶೇ 20ರಷ್ಟು ಕೃಪಾಂಕ ನೀಡಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ 50 ಅಂಕಗಳಿಗೆ ಪಠ್ಯದ ಹೊರತಾದ ಪ್ರಶ್ನೆ ಕೇಳಿದ್ದಾರೆ. ಸರ್ಕಾರಕ್ಕೆ ಶಿಕ್ಷಣ, ಪರೀಕ್ಷೆ, ತರಗತಿ ಬಗ್ಗೆ ಸ್ವಲ್ಪವೂ ಗೌರವ ಇಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಪದಾಧಿಕಾರಿಗಳಾದ ಎಸ್.ಶಿವಪ್ರಸಾದ್, ನಿಟ್ಟೂರು ಪ್ರಸಾದ್, ಗಂಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.