ADVERTISEMENT

ತುಮಕೂರು ವಿ.ವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ: ಸಚಿವ ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:24 IST
Last Updated 17 ಅಕ್ಟೋಬರ್ 2024, 14:24 IST
<div class="paragraphs"><p>ತುಮಕೂರಿನಲ್ಲಿ ಗುರುವಾರ ಜಿಲ್ಲಾ ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.&nbsp;&nbsp;</p></div>

ತುಮಕೂರಿನಲ್ಲಿ ಗುರುವಾರ ಜಿಲ್ಲಾ ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.  

   

ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಗುರುವಾರ ಭರವಸೆ ನೀಡಿದರು.

ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಸುಮಾರು 5 ಸಾವಿರ ವರ್ಷಗಳ ಹಿಂದೆ ಹುಟ್ಟಿದ ವರ್ಣಾಶ್ರಮ ಪದ್ಧತಿಯಿಂದ ಈಗಲೂ ಶ್ರಮಿಕ ವರ್ಗದವರನ್ನು ಕೆಳಸ್ತರದವರೆಂದು ಗುರುತಿಸುತ್ತಿರುವುದು ನಮ್ಮ ದೌರ್ಭಾಗ್ಯ. ದೇಶದಲ್ಲಿ ಶ್ರಮಿಕ ವರ್ಗ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಶೋಷಣೆ ನಿಂತಿಲ್ಲ. ಸಂವಿಧಾನದಲ್ಲಿ ಸಮಾನತೆ ಹಕ್ಕು ನೀಡದ್ದರೂ ಸಮಾಜದಲ್ಲಿ ಮೇಲ್ವರ್ಗ- ಕೆಳವರ್ಗ ಎಂಬ ಭೇದ ಸೃಷ್ಟಿಸಿ ಶೋಷಣೆ ಮುಂದುವರಿದಿದೆ ಎಂದು ವಿಷಾದಿಸಿದರು.

ವ್ಯಕ್ತಿಯ ವ್ಯಕ್ತಿತ್ವವನ್ನು ಜಾತಿಯಿಂದ ಗುರುತಿಸುವುದು ನಿಂತಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿ ಅವರಂತಹ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಸಾಮಾನ್ಯ ವ್ಯಕ್ತಿಯಾಗಿದ್ದ ರತ್ನಾಕರ ನಂತರ ಪರಿವರ್ತನೆ ಹೊಂದಿ ವಾಲ್ಮೀಕಿಯಾಗಿ 24,000 ಶ್ಲೋಕಗಳಿರುವ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ರಾಮಾಯಣ ಕೃತಿಯ ಮೂಲಕ ಮನುಷ್ಯ ಜೀವನವು ಸತ್ಯ, ಧರ್ಮದ ಆಧಾರದ ಮೇಲೆ ನಿಂತಿದೆ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾಋಷಿಯಾಗಿದ್ದಾರೆ. ನಮ್ಮಲ್ಲಿರುವ ದುಷ್ಟ ಗುಣಗಳನ್ನು ಸಂಹಾರ ಮಾಡಿ ಉತ್ತಮ ಗುಣ ಮೈಗೂಡಿಸಿಕೊಳ್ಳಬೇಕು ಎಂಬುದೇ ರಾಮಾಯಣದ ಸಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ಯೋಜನೆ: ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ₹11,447 ಕೋಟಿಯನ್ನು ರಾಜ್ಯ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಶೇ 3ರಷ್ಟಿದ್ದ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಲಾಗಿದೆ. 5 ಸಾವಿರ ಮಂದಿಗೆ ವಿವಿಧ ಯೋಜನೆಗಳಡಿ ತರಬೇತಿ, 74,367 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ 12 ಬುಡಕಟ್ಟು ಸಮುದಾಯದ 48 ಸಾವಿರ ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸಲು ಸುಮಾರು ₹140 ಕೋಟಿ ವೆಚ್ಚ ಮಾಡಲಾಗಿದೆ. ವಿದೇಶಿ ವ್ಯಾಸಂಗಕ್ಕೆ ನೆರವಾಗಲು ‘ಪ್ರಬುದ್ಧ’ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಸಮಾಜದಲ್ಲಿನ ದ್ವೇಷ, ಅಸೂಯೆ, ಕರುಣೆ, ಪ್ರೀತಿಯ ಪಾತ್ರಗಳನ್ನು ರಾಮಾಯಣದಲ್ಲಿ ಚಿತ್ರಿಸುವ ಮೂಲಕ ಜೀವನದ ಪ್ರತಿ ಹಂತವನ್ನು ಮಹರ್ಷಿ ವಾಲ್ಮೀಕಿ ವಿಸ್ತೃತವಾಗಿ ತೋರಿಸಿಕೊಟ್ಟಿದ್ದಾರೆ. ಇಂತಹ ಆದರ್ಶಪ್ರಾಯರನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ, ಅವರು ತಿಳಿಸಿದ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ನಾಯಕ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಾಂತಲಾ ರಾಜಣ್ಣ, ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮನುಷ್ಯ ಜೀವನದ ಪರಿಕಲ್ಪನೆಯನ್ನು ತಿಳಿಸಿಕೊಟ್ಟಿದೆ. ಜೀವನ ರೂಪಿಸಿಕೊಳ್ಳಲು ಈ ಕೃತಿ ಉತ್ತಮ ನಿದರ್ಶನವಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಕೃಷ್ಣಪ್ಪ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ಮುಖಂಡರಾದ ಬಿ.ಜಿ.ಕೃಷ್ಣಪ್ಪ, ಚಂದ್ರಶೇಖರ್‌ಗೌಡ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಜಿ.ಪುರುಷೋತ್ತಮ, ನಾಯಕ ಸಮುದಾಯದ ಮುಖಂಡರಾದ ವಿಜಯ ಕುಮಾರ, ಕೆಂಪಹನುಮಯ್ಯ, ಕೃಷ್ಣಮೂರ್ತಿ, ಸಿ.ದಾಸಪ್ಪ, ಮಹದೇವಯ್ಯ, ಶ್ರೀರಾಮಚಂದ್ರ ನಾಯಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮಿನಾರಾಯಣ ಇತರರು ಹಾಜರಿದ್ದರು.

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎನ್.ಎಸ್.ಧನುಷ್, ವೈ.ಕಾವ್ಯ, ಕೆ.ಎಸ್.ಚರಣ್‍ರಾಜ್, ಸಾನ್ವಿ, ಬಿಂದು, ಡಿ.ಎ.ಪುನೀತ್, ಓ.ಭಾರ್ಗವಿ, ಸಿ.ಎಲ್.ಚೇತನ, ಭಾನುಪ್ರಕಾಶ್, ಪುಷ್ಪಲತಾ, ಎಂ.ಸೃಷ್ಟಿ, ದೀಪ್ತಿಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಹಲಗಲಿ ಬೇಡರ ದಂಗೆಯಲ್ಲಿ ಹುತಾತ್ಮರಾದ ಜಡಗ ಹಾಗೂ ಬಾಲ ಸ್ಮರಣಾರ್ಥ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಪಂಗಡದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮೇಲನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಎಚ್.ವಿ.ಸ್ಫೂರ್ತಿ, ಶಿರಾ ತಾಲ್ಲೂಕು ಭುವನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಡಿ.ಜೆ.ನವ್ಯಶ್ರೀ ಅವರಿಗೆ ₹1 ಲಕ್ಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನಗರದಲ್ಲಿ ಬೆಳ್ಳಿ ರಥದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.