ADVERTISEMENT

ವರಮಹಾಲಕ್ಷ್ಮಿ ಹಬ್ಬ | ತುಮಕೂರು: ಮಲ್ಲಿಗೆ ಮಾರು ₹300!

ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 3:57 IST
Last Updated 16 ಆಗಸ್ಟ್ 2024, 3:57 IST
ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಗುರುವಾರ ಮಹಿಳೆಯರು ಹೂವು ಖರೀದಿಸಿದರು
ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಗುರುವಾರ ಮಹಿಳೆಯರು ಹೂವು ಖರೀದಿಸಿದರು   

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಹೂವು, ಬಾಳೆ ದಿಂಡು ಸೇರಿದಂತೆ ಅಗತ್ಯ ಸಾಮಾಗ್ರಿ ಖರೀದಿಗೆ ಮುಂದಾದ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಎರಡು ದಿನಗಳ ಹಿಂದೆ ಒಂದು ಮಾರು ಮಲ್ಲಿಗೆ ₹100ರಿಂದ ₹150 ಮಾರಾಟವಾಗುತ್ತಿತ್ತು, ಗುರುವಾರ ₹250ರಿಂದ ₹300ಗೆ ಏರಿಕೆ ಕಂಡಿದೆ. ಅಂತರಸನಹಳ್ಳಿ ಮಾರುಕಟ್ಟೆ, ಬಾಳನಕಟ್ಟೆ, ವಿನಾಯಕ ನಗರ ಮಾರುಕಟ್ಟೆಗಳ ಬಳಿ ಹೆಚ್ಚಿನ ಜನ ಸೇರಿದ್ದರು. ಜೆ.ಸಿ.ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಸವಾರರು ರಸ್ತೆ ದಾಟಲು ಪರದಾಡಿದರು. ಶ್ರೀರಾಮನಗರ, ಹನುಮಂತಪುರ, ಎಸ್‌.ಎಸ್.ಪುರಂ ಬಳಿಯೂ ಹೂವು, ಹಣ್ಣು ಇತರೆ ಸಾಮಗ್ರಿ ಖರೀದಿ ಜೋರಾಗಿತ್ತು.

ಸೇವಂತಿಗೆ ಹೂವು ಒಂದು ಮಾರು ₹200ರಿಂದ ₹250ರ ವರೆಗೆ ಮಾರಾಟವಾಗಿದೆ. ಕನಕಾಂಬರ ಮಾರು ₹300, ಗುಲಾಬಿ ಕೆ.ಜಿ ₹200 ಇದ್ದರೆ, ಕಾಕಡ ಮಾರು ₹200, ಚೆಂಡು ಹೂವು ಮಾರು ₹60ರಿಂದ ₹80ರ ವರೆಗೆ ಮಾರಾಟವಾಗುತ್ತಿದೆ. ಕಬ್ಬು ಜೋಡಿ ₹30, ಬಾಳೆ ದಿಂಡು ಜತೆ ₹60, ಮಾವಿನ ಎಲೆ ₹20 ದರ ಇತ್ತು. ಸಾರ್ವಜನಿಕರು ಹೂವಿನ ಜತೆಗೆ ಪೈನಾಪಲ್‌, ಸಪೋಟ, ಸೇಬು ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳು ಕಂಡು ಬಂದವು.

ADVERTISEMENT

ಎರಡು ಪೈನಾಪಲ್‌ ₹150, ಸೇಬು ₹220 ಬೆಲೆ ಇತ್ತು. ಮಾರುಕಟ್ಟೆಗಿಂತ ಚಿಲ್ಲರೆಯಾಗಿ ಹೆಚ್ಚಿನ ದರ ಇತ್ತು. ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಹಣ್ಣು ಕೆ.ಜಿ ₹100 ಇದ್ದರೆ, ಕೆಲವು ಕಡೆಗಳಲ್ಲಿ ₹150ರ ವರೆಗೂ ಮಾರಾಟ ಮಾಡಲಾಯಿತು. ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಕಡಿಮೆ ಪ್ರಮಾಣದಲ್ಲಿ ಹೂವು, ಹಣ್ಣು ಇತರೆ ಸಾಮಗ್ರಿ ಖರೀದಿಸಿದ್ದು ಕಂಡು ಬಂತು.

ತುಮಕೂರಿನಲ್ಲಿ ಗುರುವಾರ ಮಹಿಳೆಯರು ಬಳೆ ಖರೀದಿ ಮಾಡಿದರು
ತುಮಕೂರಿನ ಜೆ.ಸಿ.ರಸ್ತೆಯಲ್ಲಿ ಗುರುವಾರ ಸಾರ್ವಜನಿಕರು ಹೂವು ಖರೀದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.