ತುಮಕೂರು: ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆ ಏರಿಕೆಯತ್ತ ಸಾಗಿದ್ದರೆ, ಸೊಪ್ಪು ಯಥಾಸ್ಥಿತಿ ಕಾಯ್ದುಕೊಂಡಿದೆ. ಮೆಣಸು, ಏಲಕ್ಕಿ ದರ ಮತ್ತಷ್ಟು ದುಬಾರಿಯಾಗಿದೆ. ಮೀನು ಗಗನಮುಖಿಯಾಗಿದ್ದರೆ, ಕೋಳಿ ಮಾಂಸ ಅಲ್ಪ ಇಳಿಕೆಯಾಗಿದೆ.
ಟೊಮೆಟೊ ಮತ್ತೆ ದುಬಾರಿ: ಕಳೆದ ಕೆಲವು ವಾರಗಳಿಂದ ಏರಿಕೆಯತ್ತ ಮುಖಮಾಡಿದ್ದ ಟೊಮೆಟೊ ದರ ಈ ವಾರ ದುಪ್ಪಟ್ಟಾಗಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹50–60ಕ್ಕೆ ಸಿಗುತ್ತಿದ್ದರೆ, ಚಿಲ್ಲರೆಯಾಗಿ ₹70–80ಕ್ಕೆ ಮಾರಾಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಕುಸಿತ ಕಂಡಿದ್ದರಿಂದ ಬೆಳೆಯುವುದು ಕಡಿಮೆಯಾಗಿದ್ದು, ಹೊಸದಾಗಿ ಬೆಳೆ ಬರುವವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ಇಳಿಕೆಯಾಗಿದ್ದ ಬೀನ್ಸ್ ಒಮ್ಮೆಲೆ ದುಪ್ಪಟ್ಟಾಗಿದ್ದು, ಕೆ.ಜಿ ₹100–120ಕ್ಕೆ ತಲುಪಿದ್ದು, ಚಿಲ್ಲರೆ ದರ ₹150 ದಾಟಿದೆ. ಈರುಳ್ಳಿ ಧಾರಣೆ ಸಹ ಎರಡು ವಾರದಿಂದ ಏರಿಕೆಯತ್ತ ಮುಖಮಾಡಿದೆ. ತರಕಾರಿಯೂ ಇದೇ ದಾರಿಯಲ್ಲಿ ಸಾಗಿದೆ. ಗೆಡ್ಡೆಕೋಸು ದುಪ್ಪಟ್ಟಾಗಿದ್ದರೆ, ಕ್ಯಾರೇಟ್, ಎಲೆಕೋಸು, ಹೂಕೋಸು, ತೊಂಡೆಕಾಯಿ ದುಬಾರಿಯಾಗಿದೆ. ನುಗ್ಗೆಕಾಯಿ ಸಹ ದುಪ್ಪಟ್ಟಾಗಿದ್ದು, ಕೆ.ಜಿ ₹80–100ಕ್ಕೆ ತಲುಪಿದೆ. ಶುಂಠಿ, ಸೌತೆಕಾಯಿ ಸಹ ಹೆಚ್ಚಳವಾಗಿದೆ.
ಇಳಿಯದ ಸೊಪ್ಪು: ಸೊಪ್ಪಿನ ದರ ಕೆ.ಜಿ ₹100ರ ಗಡಿ ದಾಟಿದ್ದು, ಈ ವಾರವೂ ಅದೇ ಸ್ಥಿತಿಯಲ್ಲಿ ಮುಂದುವರಿದಿದೆ. ಸದ್ಯಕ್ಕೆ ಸೊಪ್ಪಿನ ಬೆಲೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹100–120, ಸಬ್ಬಕ್ಕಿ ಕೆ.ಜಿ ₹100–120, ಮೆಂತ್ಯ ಸೊಪ್ಪು ಕೆ.ಜಿ ₹120–140, ಪಾಲಕ್ ಸೊಪ್ಪು (ಕಟ್ಟು) ₹70–80ಕ್ಕೆ ಮಾರಾಟವಾಗುತ್ತಿದೆ.
ಹಣ್ಣು ಹೆಚ್ಚಳ: ಸಾಕಷ್ಟು ಸಮಯ ಯಥಾಸ್ಥಿತಿ ಕಾಯ್ದುಕೊಂಡಿದ್ದ ಹಣ್ಣುಗಳು ಈಗ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿವೆ. ಮೂಸಂಬಿ, ಕಿತ್ತಳೆ, ಪೈನಾಪಲ್ ದುಬಾರಿಯಾಗಿದೆ. ತೋತಾಪುರಿ ಮಾವು ಕೆ.ಜಿ ₹80, ಬೇನಿಷಾ ಕೆ.ಜಿ ₹100ಕ್ಕೆ ಸಿಗುತ್ತಿದೆ.
ಅಡುಗೆ ಎಣ್ಣೆ: ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹108–110, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಬೇಳೆ, ಧಾನ್ಯ: ಬೇಳೆ ಕಾಳು, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಕೆಲವು ಬೇಳೆ, ಗೋಧಿ ದರ ತುಸು ಏರಿಕೆ ಕಂಡಿದೆ. ಸಕ್ಕರೆ ಕೆ.ಜಿ ₹40 ದಾಟಿದೆ. ಅಕ್ಕಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಮೆಣಸು ದುಬಾರಿ: ಮಸಾಲೆ ಪದಾರ್ಥಗಳಲ್ಲಿ ಮೆಣಸು ಮತ್ತೆ ದುಬಾರಿಯಾಗಿದ್ದು, ಕಳೆದ ಎರಡು ವಾರಗಳಿಂದ ಏರಿಕೆಯಾಗುತ್ತಲೇ ಸಾಗಿದೆ. ಏಲಕ್ಕಿ ಸಹ ದುಬಾರಿಯಾಗಿದ್ದು, ಗೋಡಂಬಿ ದರವೂ ಹೆಚ್ಚಳವಾಗಿದೆ. ಜೀರಿಗೆ ಕೊಂಚ ಇಳಿಕೆಯಾಗಿದೆ.
ಧನ್ಯ ಕೆ.ಜಿ ₹105–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹260–280, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–230, ಹುಣಸೆಹಣ್ಣು ₹120–150, ಕಾಳುಮೆಣಸು ಕೆ.ಜಿ ₹700–750, ಜೀರಿಗೆ ಕೆ.ಜಿ ₹320–350, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–90, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹900–1,000, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಏಲಕ್ಕಿ ಕೆ.ಜಿ ₹3,500, ಬಾದಾಮಿ ಕೆ.ಜಿ ₹600–640, ಗೋಡಂಬಿ ಕೆ.ಜಿ ₹720–800, ಒಣದ್ರಾಕ್ಷಿ ಕೆ.ಜಿ ₹180–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಅಲ್ಪ ಇಳಿಕೆ: ಕೋಳಿ ಮಾಂಸದ ಬೆಲೆ ಅಲ್ಪ ಪ್ರಮಾಣದಲ್ಲಿ ತಗ್ಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹150, ರೆಡಿ ಚಿಕನ್ ಕೆ.ಜಿ ₹260, ಸ್ಕಿನ್‌ಲೆಸ್ ಕೆ.ಜಿ ₹280, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹120ಕ್ಕೆ ಸಿಗುತ್ತಿದೆ.
ಮೀನು ಗಗನಮುಖಿ: ಕೆಲವು ವಾರಗಳಿಂದ ಮೀನು ದುಬಾರಿಯಾಗುತ್ತಲೇ ಸಾಗಿದ್ದು, ಈ ವಾರ ಕೆಲವು ಮೀನುಗಳ ಧಾರಣೆ ಕೆ.ಜಿಗೆ ₹100ರಿಂದ 300ರ ವರೆಗೂ ಜಿಗಿತ ಕಂಡಿದೆ. ಬಂಗುಡೆ ಕೆ.ಜಿ ₹450, ಬೂತಾಯಿ ಕೆ.ಜಿ ₹340, ಬೊಳಿಂಜರ್ ಕೆ.ಜಿ ₹280, ಅಂಜಲ್ ಕೆ.ಜಿ ₹1,680, ಬಿಳಿಮಾಂಜಿ ಕೆ.ಜಿ ₹1,500, ಕಪ್ಪುಮಾಂಜಿ ಕೆ.ಜಿ ₹1,260, ಇಂಡಿಯನ್ ಸಾಲ್ಮನ್ ಕೆ.ಜಿ ₹1,190, ಸೀಗಡಿ ಕೆ.ಜಿ ₹470, ಏಡಿ ಕೆ.ಜಿ 480ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.