ತುಮಕೂರು: ತರಕಾರಿ ಧಾರಣೆ ಗಗನಮುಖಿಯಾಗಿದ್ದರೆ, ಸೊಪ್ಪು ಸಹ ಅದೇ ದಾರಿಯಲ್ಲಿ ಸಾಗಿದೆ. ಬೆಳ್ಳುಳ್ಳಿ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದ್ದರೆ, ಟೊಮೆಟೊ ಇಳಿಕೆಯತ್ತ ಸಾಗಿದೆ. ಹಣ್ಣುಗಳ ದರ ಕೊಂಚ ತಗ್ಗಿದೆ.
ನಿರಂತರ ಮಳೆಯಿಂದಾಗಿ ತರಕಾರಿ ಬೆಳೆ ಹಾಳಾಗಿದ್ದು, ಕೆಲವು ಕಡೆಗಳಲ್ಲಿ ಗಿಡದಿಂದ ತರಕಾರಿ ಕೀಳಲಾಗದೆ ಮಾರುಕಟ್ಟೆಯಲ್ಲಿ ಆವಕ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಬೆಲೆ ಏರುವಂತೆ ಮಾಡಿದೆ. ಮೂಲಂಗಿ ದರವೇ ಕೆ.ಜಿ ₹40–50ಕ್ಕೆ, ಬದನೆಕಾಯಿ ಕೆ.ಜಿ ₹50–60ಕ್ಕೆ ಜಿಗಿದಿದೆ. ಗೆಡ್ಡೆಕೋಸು, ಬೆಂಡೆಕಾಯಿ, ಎಲೆಕೋಸು, ಹಾಗಲಕಾಯಿ, ಹಸಿರು ಮೆಣಸಿನಕಾಯಿ ದರ ಹೆಚ್ಚಳವಾಗಿದೆ. ಕ್ಯಾರೇಟ್, ಟೊಮೆಟೊ ಕೆ.ಜಿಗೆ ₹10 ಇಳಿಕೆಯಾಗಿದ್ದು, ಕೆ.ಜಿ ₹40–50ಕ್ಕೆ ಸಿಗುತ್ತಿದೆ.
ಬೆಳ್ಳುಳ್ಳಿ ಧಾರಣೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದೆ. ಕೆ.ಜಿ ₹320–350ರ ವರೆಗೂ ಮಾರಾಟವಾಗುತ್ತಿದೆ. ಈರುಳ್ಳಿ ದರದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಸೌತೆಕಾಯಿ, ಶುಂಠಿಯೂ ಕೊಂಚ ಹೆಚ್ಚಳವಾಗಿದೆ.
ಪಾಲಕ್ ಸೊಪ್ಪು ದುಬಾರಿ: ಮಳೆಯಿಂದ ಸೊಪ್ಪಿನ ಬೆಳೆ ಹಾಳಾಗಿದ್ದು, ಉತ್ತಮ ಬೆಲೆ ಸಿಗುತ್ತಿದೆ. ಪಾಲಕ್ ಸೊಪ್ಪು ಬೆಲೆ ಒಮ್ಮೆಲೆ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40–50, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹100ಕ್ಕೆ ಏರಿಕೆಯಾಗಿದೆ.
ಏಲಕ್ಕಿ ಬಾಳೆ ಇಳಿಕೆ: ಸಾಕಷ್ಟು ದುಬಾರಿಯಾಗಿದ್ದ ಏಲಕ್ಕಿ ಬಾಳೆ ಹಣ್ಣಿನ ದರ ನಿಧಾನವಾಗಿ ಇಳಿಕೆಯಾಗುತ್ತಿದೆ. ದಾಳಿಂಬೆ, ಮೂಸಂಬಿ, ಪಪ್ಪಾಯ, ಕಲ್ಲಂಗಡಿ ಕಡಿಮೆಯಾಗಿದ್ದರೆ, ಕರಬೂಜ ದುಬಾರಿಯಾಗಿದೆ.
ಎಣ್ಣೆ ಗಗನಮುಖಿ: ವಾರದಿಂದ ವಾರಕ್ಕೆ ಅಡುಗೆ ಎಣ್ಣೆ ಧಾರಣೆ ಏರುತ್ತಲೇ ಸಾಗಿದೆ. ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹163–165, ಪಾಮಾಯಿಲ್ ಕೆ.ಜಿ ₹120–122, ಕಡಲೆಕಾಯಿ ಎಣ್ಣೆ ಕೆ.ಜಿ ₹165–170ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಬೇಳೆ ಹೆಚ್ಚಳ: ತೊಗರಿ ಬೇಳೆ, ಹೆಸರು ಕಾಳು ಸೇರಿದಂತೆ ಕೆಲವು ಬೇಳೆ, ಧಾನ್ಯಗಳ ದರ ತುಸು ಹೆಚ್ಚಳವಾಗಿದೆ. ದುಬಾರಿಯಾಗಿದ್ದ ಬಟಾಣಿ ಈಗ ಇಳಿಕೆಯತ್ತ ಮುಖ ಮಾಡಿದ್ದು, ಉದ್ದಿನ ಬೇಳೆ, ಹುರುಳಿಕಾಳು ಅಲ್ಪ ಕಡಿಮೆಯಾಗಿದೆ.
ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮೆಣಸಿನ ಕಾಯಿ, ಮೆಣಸು, ಜೀರಿಗೆ ಅಲ್ಪ ಏರಿದ್ದರೆ, ಏಲಕ್ಕಿ ಕೊಂಚ ಇಳಿಕೆ ದಾಖಲಿಸಿದೆ.
ಧನ್ಯ ಕೆ.ಜಿ ₹110–150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹170–175, ಹುಣಸೆಹಣ್ಣು ₹140–150, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹700–730, ಜೀರಿಗೆ ಕೆ.ಜಿ ₹320–330, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹780–850, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಏಲಕ್ಕಿ ಕೆ.ಜಿ ₹2,500–2,600, ಬಾದಾಮಿ ಕೆ.ಜಿ ₹700–720, ಗೋಡಂಬಿ ಕೆ.ಜಿ ₹850–950, ಒಣದ್ರಾಕ್ಷಿ ಕೆ.ಜಿ ₹190–210ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಮಾಂಸ: ಈ ವಾರ ಕೋಳಿ ಮಾಂಸದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆಕೋಳಿ (ಫಾರಂ) ಕೆ.ಜಿ ₹130ಕ್ಕೆ ಸಿಗುತ್ತಿದೆ.
ಮೀನು ಏರಿಕೆ: ಮೀನಿನ ಧಾರಣೆಯೂ ಏರಿಕೆ ದಾಖಲಿಸಿದೆ. ಬಂಗುಡೆ ಕೆ.ಜಿ ₹170, ಬೂತಾಯಿ ಕೆ.ಜಿ ₹300, ಬೊಳಿಂಜರ್ ಕೆ.ಜಿ ₹250, ಅಂಜಲ್ ಕೆ.ಜಿ ₹880, ಬಿಳಿಮಾಂಜಿ ಕೆ.ಜಿ ₹1,060 ಕಪ್ಪುಮಾಂಜಿ ಕೆ.ಜಿ ₹720, ಇಂಡಿಯನ್ ಸಾಲ್ಮನ್ ಕೆ.ಜಿ ₹940, ಸೀಗಡಿ ಕೆ.ಜಿ ₹470–850, ಏಡಿ ಕೆ.ಜಿ ₹550ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.