ತಿಪಟೂರು: ಪಶುವೈದ್ಯರ ತಂಡವು ಎಕ್ಸ್‌ರೇ ಇಲ್ಲದೆಯೇ ಹಳ್ಳಿಕಾರ್ ಎತ್ತಿನ ಕರುಳಿನಲ್ಲಿ ಉಂಟಾಗಿರುವ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚಿ ಅದು ನಿಂತಿರುವ ಸ್ಥಿತಿಯಲ್ಲೇ ಬಲಭಾಗದ ಉದರ ತೆರೆಯುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ತಾಲ್ಲೂಕಿನ ಮಲ್ಲಿದೇವಿಹಳ್ಳಿಯ ಉಗ್ರೇಗೌಡ ಅವರ ಎತ್ತು ನಾಲ್ಕು ದಿನಗಳಿಂದ ಸಗಣಿ ಇಡಲಾಗದೆ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಈ ಸ್ಥಿತಿಯನ್ನು ಇಂಟಸ್ಸ್‌ಸೆಪ್ಶನ್ ಎಂದು ನೊಣವಿನಕೆರೆ ಪಶು ಆಸ್ಪತ್ರೆಯ ಹಿರಿಯ ಪಶುವೈದ್ಯ ಡಾ.ಎಸ್.ಪಿ. ಮಂಜುನಾಥ್ ನೇತೃತ್ವದ ತಂಡ ಪತ್ತೆ ಹಚ್ಚಿದೆ.
ರೈತರ ಮನೆಯಲ್ಲಿಯೇ ಎತ್ತು ನಿಂತಿರುವ ಸ್ಥಿತಿಯಲ್ಲೇ ಎರಡು ಗಂಟೆ ಕಾಲ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿತು. ನಂತರ ಎತ್ತು ಮೇವನ್ನು ಮೊದಲಿನಂತೆ ತಿನ್ನುತ್ತಾ ಸರಿಯಾಗಿ ಸಗಣಿ ಇಡುತ್ತಿದೆ.
ಮಂಜುನಾಥ್ ಅವರೊಂದಿಗೆ ಪಶುವೈದ್ಯ ಡಾ.ಪ್ರಭು ಕಾಳಗಿ ಶಸ್ತ್ರಚಿಕಿತ್ಸೆ ನಡೆಸಿದರು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ನಾಗರಾಜು ವೈದ್ಯರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಅನುಪಾಲನೆ ಮಾಡಿದರು.
ಬಳಿಕ ಮಾತನಾಡಿದ ಡಾ.ಮಂಜುನಾಥ್, ‘ಹಸುಗಳಲ್ಲಿ ಉದರ ಸಂಬಂಧಿತ ಕಾಯಿಲೆಗಳಾಗುವುದು ಸಹಜ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ನಡೆಸಬೇಕಾದ ಪರಿಸ್ಥಿತಿ ಬರುತ್ತದೆ. ಆಗ ಪಶುವೈದ್ಯರ ಮಾರ್ಗದರ್ಶನದಂತೆ ರೈತರು ಹೆದರದೆ ಶಸ್ತ್ರಚಿಕಿತ್ಸೆ ನಡೆಸಲು ಸಹಕರಿಸಿದರೆ ಅನೇಕ ಜಾನುವಾರುಗಳ ಪ್ರಾಣ ಉಳಿಸಬಹುದಾಗಿದೆ’ ಎಂದು ತಿಳಿಸಿದರು.
ಈ ಎತ್ತಿನಲ್ಲಿ ಇಂಟಸ್ಸ್‌ಸೆಪ್ಶನ್ ಎಂಬ ಸ್ಥಿತಿ ಉಂಟಾಗಿತ್ತು. ಇದರಲ್ಲಿ ಕರುಳಿನ ಒಂದು ಭಾಗ ಇನ್ನೊಂದು ಭಾಗದೊಳಗೆ ಸಿಲುಕಿ ಹಿಂಡಿದಂತಾಗಿರುತ್ತದೆ. ಈ ಸ್ಥಿತಿಯಲ್ಲಿ ಹಿಂಡಿದಂತಾದ ಕರುಳು ಕೊಳೆಯಲಾರಂಭಿಸಿರುತ್ತದೆ. ಕೊಳೆತ ಕರುಳನ್ನು ಕತ್ತರಿಸಿ ತೆಗೆದು ಮರುಜೋಡಣೆ ಮಾಡಿ ಜಾನುವಾರನ್ನು ಬದುಕಿಸಬಹುದಾಗಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.