ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಸೋಲಾರ್ ಪಾರ್ಕ್‌ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ನಿಯೋಗ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.
ವಿಧಾನಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ನೇತೃತ್ವದಲ್ಲಿ ವಿಧಾನಸಭೆ ಮತ್ತು ಪರಿಷತ್ ಸದಸ್ಯರ ನಿಯೋಗ ಸೋಲಾರ್ ಪಾರ್ಕ್‌ಗೆ ಭೇಟಿ ನೀಡಿ ಸೋಲಾರ್ ಪಾರ್ಕ್ ವಿಶೇಷತೆ, ಸಾಮರ್ಥ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.
ತಿರುಮಣಿ ಬಳಿಯ ಸೋಲಾರ್ ಪಾರ್ಕ್‌ನ ಆಡಳಿತ ಕಚೇರಿಗೆ ಭೇಟಿ ನೀಡಿ ಸೋಲಾರ್ ಪಾರ್ಕ್ ಮಾದರಿಯನ್ನು ಸಮಿತಿಯ ಸದಸ್ಯರು ವೀಕ್ಷಿಸಿದರು. ನಂತರ ಅಧಿಕಾರಿಗಳು ಇಲ್ಲಿನ ವಿಸ್ತೀರ್ಣ, ಕಾರ್ಯ ವೈಖರಿಯನ್ನು ಪಿಪಿಟಿ ಮೂಲಕ ವಿವರಿಸಿದರು.
ಆಡಳಿತ ಕಚೇರಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಜೊತೆ, ಇಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.
ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ಇಂಧನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್‌ನಂತೆಯೇ ರಾಜ್ಯದ ಸೂಕ್ತ ಪ್ರದೇಶಗಳನ್ನು ಗುರುತಿಸಿ ಸೋಲಾರ್ ಘಟಕ ಅಥವಾ ಪಾರ್ಕ್ ನಿರ್ಮಾಣವಾಗಬೇಕು. ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ವಿಸ್ತರಿಸಬೇಕು ಎಂದರು.
ಶಾಸಕ ಎಚ್.ವಿ ವೆಂಕಟೇಶ್, ಸೋಲಾರ್ ಪಾರ್ಕ್ ನಿರ್ಮಾಣವಾಗಿರುವ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಆದ್ಯತೆ ನೀಡಬೇಕು. ಸ್ಥಳೀಯ ಯುವಕರಿಗೆ ತರಬೇತಿ ನೀಡಬೇಕು. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕ್ರೆಡಲ್ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ, ಶಾಸಕ ಯು.ಬಿ.ಬಣಕಾರ್, ಡಿ.ಜಿ.ಶಾಂತನಗೌಡ, ಎಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಭಾರತಿ ಶೆಟ್ಟಿ ನಿಯೋಗದಲ್ಲಿದ್ದರು.
ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಕೆಎಸ್‌ಪಿಡಿಸಿಎಲ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮರನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.