ಗುಬ್ಬಿ: ‘ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಡೆ ನೋಡಿದರೆ ಅಕ್ರಮ ಮದ್ಯ ಮಾರಾಟದಲ್ಲಿ ಅವರು ಶಾಮೀಲಾಗಿರುವಂತೆ ಕಾಣುತ್ತದೆ’ ಎಂದು ಆರೋಪಿಸಿ ಕಡಬ ಹೋಬಳಿ ಬ್ಯಾಡಿಗೆರೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ಅಕ್ರಮ ಮದ್ಯ ಮಾರಾಟ ತಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ. ಗ್ರಾಮದ ಅನೇಕರು ಮದ್ಯಪಾನ ಚಟಕ್ಕೆ ಬಲಿಯಾಗಿ ಸಂಸಾರ ಬೀದಿಗೆ ಬೀಳುವ ಸ್ಥಿತಿಗೆ ಬಂದಿದೆ. ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ತಡೆದು ಮಾರಾಟಗಾರರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾ.ಪಂ ಸದಸ್ಯ ನಂದೀಶ್ ಮಾತನಾಡಿ, ಬ್ಯಾಡಿಗೆರೆ ಸುತ್ತಮುತ್ತ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ತಡೆಯದಿದ್ದರೆ ಈಗಾಗಲೇ ಬರಗಾಲದಿಂದ ತತ್ತರಿಸಿರುವ ಜನರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.
ಅಬಕಾರಿ ಇಲಾಖೆ ಸಬ್ ಇನ್‌ಸ್ಪೆಕ್ಟರ್ ಗಂಗಯ್ಯ ಮನವಿಸಿ ಸ್ವೀಕರಿಸಿದರು.ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ, ಸದಸ್ಯ ವರದರಾಜ್, ರಾಜಣ್ಣ, ಶಿವಕುಮಾರಸ್ವಾಮಿ, ಧನಂಜಯ್, ನಂದೀಶ್, ಮಂಜುಳ, ಮಾರುತಿ, ಬ್ಯಾಟರಾಜು, ಜಮೀಲಾಬಾನು, ಗೀತಾ, ರಮೇಶ್, ಕೌಜಿಯ, ಇರ್ಫಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.