ADVERTISEMENT

ತುಮಕೂರು | ತುಮುಲ್‌ ಚುನಾವಣೆ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ತುಮುಲ್‌ ಚುನಾವಣೆ;ಸುಸೂತ್ರವಾಗಿ ನಡೆದ ಮತದಾನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 2:34 IST
Last Updated 11 ನವೆಂಬರ್ 2024, 2:34 IST
ತುಮಕೂರು ಎಂಪ್ರೆಸ್‌ ಕಾಲೇಜಿನ ಮತಗಟ್ಟೆ ಬಳಿ ಭಾನುವಾರ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು
ತುಮಕೂರು ಎಂಪ್ರೆಸ್‌ ಕಾಲೇಜಿನ ಮತಗಟ್ಟೆ ಬಳಿ ಭಾನುವಾರ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು   

ತುಮಕೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) 10 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಿತು. 10 ತಾಲ್ಲೂಕುಗಳ 21 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಯಿತು.

ನಗರದ ಎಂಪ್ರೆಸ್ ಕಾಲೇಜಿನ ಮತಗಟ್ಟೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಿತು. ಪ್ರಾರಂಭದಲ್ಲಿ 1,146 ಜನ ಮತದಾನದ ಹಕ್ಕು ಪಡೆದಿದ್ದರು. ನಂತರ 45 ಮಂದಿ ಹೈಕೋರ್ಟ್‌ ಮೊರೆ ಹೋಗಿ ಮತದಾನ ಮಾಡಲು ಅವಕಾಶ ಪಡೆದರು. ಒಟ್ಟು 1,191 ಮಂದಿ ಪೈಕಿ 1,188 ಜನ ಮತ ಚಲಾಯಿಸಿದರು. ತುಮಕೂರಿನ ಇಬ್ಬರು, ಗುಬ್ಬಿಯ ಒಬ್ಬರು ಮತದಾನದಿಂದ ದೂರು ಉಳಿದರು. ಶೇ 99.74 ರಷ್ಟು ಮತದಾನವಾಯಿತು.

ಅನರ್ಹಗೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳು (ಡೇರಿ) ಹೈಕೋರ್ಟ್ ಮೂಲಕ ಮತದಾನಕ್ಕೆ ಅವಕಾಶ ಪಡೆದುಕೊಂಡಿವೆ. ಕುಣಿಗಲ್ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಯಾರೊಬ್ಬರೂ ನ್ಯಾಯಾಲಯದ ಮೊರೆ ಹೋಗಿಲ್ಲ. ಈ ಎರಡು ತಾಲ್ಲೂಕು ಹೊರತುಪಡಿಸಿ ಉಳಿದ 8 ತಾಲ್ಲೂಕುಗಳಿಗೆ ಪ್ರತಿ ತಾಲ್ಲೂಕಿಗೆ ಎರಡು ಪ್ರತ್ಯೇಕ ಮತಪೆಟ್ಟಿಗೆ ಸ್ಥಾಪಿಸಲಾಗಿತ್ತು. ಕೋರ್ಟ್‌ನಿಂದ ಅನುಮತಿ ಪಡೆದವರಿಗೆ ಪ್ರತ್ಯೇಕ ಮತಪೆಟ್ಟಿಗೆಯ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಬಿಸಿಲು ಏರಿಕೆಯಾಗುತ್ತಿದ್ದಂತೆ ಚುರುಕು ಪಡೆಯಿತು. 11 ಗಂಟೆಯ ನಂತರ ಹೆಚ್ಚಿನ ಮತದಾರರು ಮತಗಟ್ಟೆಯ ಕಡೆ ಹೆಜ್ಜೆ ಹಾಕಿದರು. ಆಯಾ ತಾಲ್ಲೂಕಿನ ಮತದಾರರು ಪ್ರತ್ಯೇಕ ವಾಹನಗಳಲ್ಲಿ ಮತ ಕೇಂದ್ರದತ್ತ ಆಗಮಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಎಂಪ್ರೆಸ್‌ ಮುಂಭಾಗದ ಫುಟ್‌ಪಾತ್‌ನಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಮತಗಟ್ಟೆ ಕೇಂದ್ರದ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಅಶೋಕ ರಸ್ತೆಯಲ್ಲಿ ಬೈಕ್‌ಗಳನ್ನು ಸಾಲಾಗಿ ನಿಲ್ಲಿಸಿದ್ದರಿಂದ ಇತರೆ ವಾಹನಗಳ ಓಡಾಟಕ್ಕೆ ಸಮಸ್ಯೆಯಾಯಿತು.

ಕೊರಟಗೆರೆ ಹೊರೆತುಪಡಿಸಿದರೆ ಉಳಿದ ಎಲ್ಲ ಕಡೆ ನೇರ ಹಣಾಹಣಿ ಏರ್ಪಟ್ಟಿತ್ತು. 9 ತಾಲ್ಲೂಕುಗಳಲ್ಲಿ ತಲಾ ಇಬ್ಬರು ಸ್ಪರ್ಧೆಯಲ್ಲಿದ್ದರೆ, ಕೊರಟಗೆರೆಯಲ್ಲಿ ಮೂರು ಜನ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಮತದಾನಕ್ಕೆ ಹಲವು ದಿನಗಳ ಮುನ್ನವೇ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಾಯಕರು ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಪಣತೊಟ್ಟಿದ್ದರು. ಇದೀಗ ಮತದಾನ ಪ್ರಕ್ರಿಯೆ ಮುಗಿದಿದ್ದು, ಯಾರು ತುಮುಲ್‌ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.

ಮತದಾನದ ವಿವರ

ತಾಲ್ಲೂಕು;ಮತದಾರರು;ಮತದಾನ

ತುಮಕೂರು;152;150

ಗುಬ್ಬಿ;121;120

ಚಿಕ್ಕನಾಯಕನಹಳ್ಳಿ;109;109

ತಿಪಟೂರು;140;140

ತುರುವೇಕೆರೆ;119;119

ಕುಣಿಗಲ್‌;141;141

ಮಧುಗಿರಿ;117;117

ಕೊರಟಗೆರೆ;121;121

ಶಿರಾ;113;113

ಪಾವಗಡ;58;58

ಒಟ್ಟು;1,191;1,188

ಆದೇಶದ ನಂತರ ಮತ ಎಣಿಕೆ

ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ. ಮತಪೆಟ್ಟಿಗೆಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ. ಹೈಕೋರ್ಟ್‌ನ ಆದೇಶದ ನಂತರ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಉಪವಿಭಾಗಾಧಿಕಾರಿ ಗೌರವ್‌ಕುಮಾರ್‌ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.