ADVERTISEMENT

ತುಮಕೂರು | 'ಸಂಶೋಧನಾರ್ಥಿಗೆ ಶಿಸ್ತು ಕ್ರಮದ ಎಚ್ಚರಿಕೆ'

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 5:22 IST
Last Updated 6 ಜೂನ್ 2024, 5:22 IST
ತುಮಕೂರು ವಿಶ್ವವಿದ್ಯಾಲಯ
ತುಮಕೂರು ವಿಶ್ವವಿದ್ಯಾಲಯ   

ತುಮಕೂರು: ಪಿಎಚ್.ಡಿ ಸಂಶೋಧನಾರ್ಥಿಗಳನ್ನು ಕಾಲೇಜುಗಳಲ್ಲಿ ಬೋಧನೆಗೆ ನಿಯೋಜಿಸಿದ್ದು, ನಿಗದಿಪಡಿಸಿದ ಕಾರ್ಯಭಾರ ನಿರ್ವಹಿಸದಿದ್ದರೆ ಶಿಸ್ತು ಕ್ರಮಕೈಗೊಳ್ಳುವುದಾಗಿ ವಿಶ್ವವಿದ್ಯಾಲಯ ಎಚ್ಚರಿಸಿದೆ.

‘ಯುಜಿಸಿಯಿಂದ ಸಂಶೋಧನಾ ವೇತನ ಪಡೆಯುತ್ತಿರುವ ಎಲ್ಲ ಪೂರ್ಣಕಾಲಿಕ ಸಂಶೋಧನಾರ್ಥಿಗಳು ಕಡ್ಡಾಯವಾಗಿ ವಾರಕ್ಕೆ ಕನಿಷ್ಠ 4 ಗಂಟೆಗಳ ಬೋಧನಾ ಕಾರ್ಯಭಾರ ನಿವರ್ಹಿಸಬೇಕು’ ಎಂದು ವಿ.ವಿ ಆದೇಶಿಸಿದೆ.

‘ಯುಜಿಸಿ ನಿಯಮಾವಳಿ ಪ್ರಕಾರ ಅಗತ್ಯ ಕೋರ್ಸ್‌ ವರ್ಕ್‌ ಸಂದರ್ಭಕ್ಕಷ್ಟೇ ಬೋಧನಾ ಕಾರ್ಯಭಾರ ಸೀಮಿತವಾಗಿದೆ. ಕೋರ್ಸ್‌ ವರ್ಕ್‌ ಮುಗಿಸಿದದವರು ಬೋಧನಾ ಕಾರ್ಯಭಾರ ನಿರ್ವಹಿಸುವ ಅಗತ್ಯವಿಲ್ಲ’ ಎಂದು ಸಂಶೋಧನಾರ್ಥಿಗಳು ಹೇಳುತ್ತಿದ್ದಾರೆ.

ADVERTISEMENT

‘ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಪ್ರತಿಕ್ರಿಯೆ ನೀಡದೆ ಮೊದಲು ಬೋಧನೆ, ಆಮೇಲೆ ಸಂಶೋಧನೆ ಎಂಬ ಧಾಟಿಯಲ್ಲಿ ಉತ್ತರಿಸಿದೆ. ಇದರಿಂದ ನಮ್ಮ ಸಂಶೋಧನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಗೊಂದಲಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಯುಜಿಸಿಗೆ ಇ–ಮೇಲ್ ಮಾಡಲಾಗಿದೆ. ಯುಜಿಸಿಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಶ್ವವಿದ್ಯಾಲಯ, ಯುಜಿಸಿ ನಡೆಯಿಂದ‌ ಸಂಶೋಧನಾರ್ಥಿಗಳು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಯುಜಿಸಿಯಿಂದ ಶಿಷ್ಯ ವೇತನ‌ ಪಡೆಯುತ್ತಿದ್ದೇವೆ ಎಂಬುವುದನ್ನು ಗುರಿಯಾಗಿಸಿಕೊಂಡು ದುರುದ್ದೇಶದಿಂದ ನಿಯಮಬಾಹಿರವಾಗಿ ನಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ದೂರಿದ್ದಾರೆ.

‘2023–24ನೇ ಶೈಕ್ಷಣಿಕ ಸಾಲಿನ ಅಂತ್ಯದ ವರೆಗೆ ತಮಗೆ ನಿಗದಿ ಪಡಿಸಿದ ಬೋಧನಾ ಕಾರ್ಯಭಾರವನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ತಪ್ಪಿದರೆ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ವಿಶ್ವವಿದ್ಯಾಲಯವು ತನ್ನ ‘ಅಂತಿಮ ಎಚ್ಚರಿಕೆ ಪತ್ರ’ದಲ್ಲಿ ತಿಳಿಸಿದೆ’ ಎಂದು ಸಂಶೋಧನಾರ್ಥಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.