ತೋವಿನಕೆರೆ: ಕೊರಟಗೆರೆ ತಾಲ್ಲೂಕು ನಿರಂತರವಾಗಿ ಬರಗಾಲದಿಂದ ತತ್ತರಿಸುತ್ತಿದ್ದು, ಹೆಚ್ಚಿನ ಕೆರೆಗಳು ನೀರಿಲ್ಲದೆ ಒಣಗಿವೆ. ಆಶ್ಚರ್ಯವೆಂದರೆ ತಾಲ್ಲೂಕಿನ ಗಟ್ಲಹಳ್ಳಿ ಕೆರೆ ಎಂಟು ವರ್ಷಗಳಿಂದ ನೀರು ತುಂಬಿಕೊಂಡು ಗಮನ ಸೆಳೆದಿದೆ.
ಗಟ್ಲಹಳ್ಳಿ ಕೆರೆಯು ನಿರಂತರವಾಗಿ ತುಂಬಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಒಣಗಿಲ್ಲ. ಹಳ್ಳದ ದಡಗಳ ಸಮೀಪ ಮರಳು ಬೋರ್‌ಗಳು ಕೇವಲ 20-30 ಅಡಿಗಳನ್ನು ಕೊರೆಯಿಸಿದರೆ ಸಾಕು ಸಮೃದ್ಧಿಯಾದ ನೀರು ಸಿಗುತ್ತದೆ. ಐವತ್ತಕ್ಕೂ ಹೆಚ್ಚು ಈ ರೀತಿಯ ಮರಳಿನ ಕೊಳವೆ ಬಾವಿಗಳು ಕೃಷಿಗೆ ನೀರು ಕೊಡುತ್ತಿವೆ. ರೈತರು, ಅಡಿಕೆ, ತೆಂಗು, ತರಕಾರಿ, ಹೂವಿನ ಬೇಸಾಯ ಮಾಡುತ್ತಿದ್ದಾರೆ.
ಕೆರೆಯ ಸುತ್ತಮುತ್ತಲಿನ ಪ್ರದೇಶವು ಬೆಟ್ಟದಿಂದ ಕೂಡಿದ್ದು, ಅಲ್ಪ ಸ್ವಲ್ಪ ಮಳೆ ಬಂದರೆ ಸಾಕು ಕೆರೆಗೆ ನೀರು ಬರುತ್ತದೆ. ಕೆರೆಯ ವಿಸ್ತೀರ್ಣ 90 ಎಕರೆ ಇದ್ದು, ಅಚ್ಚುಕಟ್ಟು ಪ್ರದೇಶ 250 ಎಕರೆ ಇದೆ.
ಸರ್ಕಾರಿ ಆದೇಶದಂತೆ 8 ವರ್ಷಗಳ ಹಿಂದೆ ಕೆರೆಗಳ ತೂಬನ್ನು ಎತ್ತಿ ನೀರನ್ನು ಹೊರ ಬಿಡದಂತೆ ಆದೇಶ ಮಾಡಿ ತೂಬಿಗೆ ಮಣ್ಣು ಹಾಕಿ ಮುಚ್ಚಿಸಲಾಗಿತ್ತು ಹಾಗಾಗಿ ಇಲ್ಲಿ ಶೇಖರಣೆಗೊಂಡ ನೀರು ಹೋರ ಹೋಗಿಲ್ಲ. ಅಲ್ಲದೆ ಕೆರೆ ಅಂಗಳ ಪೂರ್ತಿಯಾಗಿ ತಲಪುರಿಗೆಯ ಕಣ್ಣುಗಳನ್ನು ಹೊಂದಿದೆ. ಕೆಲವು ದಶಕಗಳ ಹಿಂದೆ ಇಲ್ಲಿನ ತಲಪುರಿಗೆಗಳು ಕೃಷಿಕರ ಜೀವನಾಡಿಯಾಗಿದ್ದವು.
ಕೆರೆಯು ಸಂಪೂರ್ಣವಾಗಿ ಮರಳಿನಿಂದ ಕೂಡಿದೆ. ಯಾರು ಮರಳನ್ನು ಎತ್ತಿಕೊಂಡು ಹೊಗುವಂತಿಲ್ಲ. ಕೆರೆ ಅಂಗಳದಲ್ಲಿ 30 ಅಡಿಗೂ ಹೆಚ್ಚು ಆಳದವರೆಗೆ ಮರಳು ತುಂಬಿದೆ. ಮರಳಿಗೆ ಕೈ ಹಾಕಿ ಸ್ವಲ್ಪ ಅಳ ತೋಡಿದರೆ ತೇವಾಂಶ ಕಂಡು ಬರುತ್ತದೆ ಎನ್ನುತ್ತಾರೆ ಕುರಿಗಾಹಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.