ತುಮಕೂರು: ‘ಫಲಿತಾಂಶ ಬರುವವರೆಗೂ ಕಾಯುವುದಿಲ್ಲ. ಏಪ್ರಿಲ್ 23ರಂದು ಕರ್ನಾಟಕದಲ್ಲಿ ಚುನಾವಣೆ ಮುಗಿಯುತ್ತೆ. ಅದಾದ ಕೂಡಲೇ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಹೇಳುತ್ತೇನೆ. ಆ ಸಭೆಯಲ್ಲಿ ಜಿಲ್ಲೆಯ 11 ತಾಲ್ಲೂಕುಗಳ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಗುವುದು. ಇದು ನನ್ನ ಬದ್ಧತೆ’
ಈ ಮಾತುಗಳನ್ನು ಖಡಕ್ ಆಗಿ ಹೇಳಿದವರು ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ. ಬಿರುಸಿನ ಪ್ರಚಾರದ ನಡುವೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿದ್ದರ ಬಗ್ಗೆ ವಿರೋಧ ವ್ಯಕ್ತವಾಗಿದೆಯಲ್ಲ?
ಅದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಹಾಲಿ ಸಂಸದರು ಇರುವ ಕಾಂಗ್ರೆಸ್ ಕ್ಷೇತ್ರಗಳನ್ನು ನಾವು ಕೇಳಿರಲಿಲ್ಲ. ಮೈಸೂರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಮಗೆ ತುಮಕೂರನ್ನು ಬಿಟ್ಟುಕೊಟ್ಟರು.
ನಿಮ್ಮ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಆರೋಪಗಳ ಬಗ್ಗೆ ಏನು ಹೇಳುತ್ತೀರಾ?
ಅವರು ಅಸಂಸದೀಯ ಭಾಷೆ ಬಳಸುತ್ತಿದ್ದಾರೆ. 60 ವರ್ಷ ರಾಜಕಾರಣ ಮಾಡಿ, ಮಾಜಿ ಪ್ರಧಾನಿಯಾಗಿ ಅವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ. ಅವರ ಭಾಷೆಯನ್ನು ನಾನು ಬಳಸುವುದಿಲ್ಲ. ಜನರೇ ಸತ್ಯಾಂಶ ಅರಿತು ಅವರಿಗೆ ಉತ್ತರ ಕೊಡುತ್ತಾರೆ.
ನೀವು ಸ್ಥಳೀಯರಲ್ಲ ಎಂಬ ಆಕ್ಷೇಪಕ್ಕೆ ಏನು ಹೇಳುವಿರಿ?
ನಾನು ಪಕ್ಕದೂರಿನವನು. ತುಮಕೂರು ಜಿಲ್ಲೆಯ ಜನರು ನನ್ನನ್ನು ಬಹಳ ವರ್ಷಗಳಿಂದ ಬೆಂಬಲಿಸಿಕೊಂಡು ಬಂದಿದ್ದಾರೆ. ಇಂತಹ ಅರ್ಥವಿಲ್ಲದ ಆಕ್ಷೇಪಗಳಿಗೆ ಜನರು ಸೊಪ್ಪು ಹಾಕುವುದಿಲ್ಲ.
ಜಿಲ್ಲೆಯ ತೆಂಗುಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆ ಪರಿಹಾರಕ್ಕೆ ಏನು ಮಾಡುತ್ತೀರಿ?
ತೆಂಗು ಬೆಳೆಗಾರರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ನನಗೆ ಅರಿವಿದೆ. ಮೂರು ವರ್ಷಗಳ ಹಿಂದೆಯೇ ನಾನು ಛಾಯಾಚಿತ್ರಗಳನ್ನು ತೆಗೆದಿ ಆಲ್ಬಂ ಮಾಡಿ ಸಂಸದರ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಿ ಸಲ್ಲಿಸಿದೆ. ಕೇರಳ ಮಾದರಿಯಲ್ಲಿ ಪರಿಹಾರ ಕೊಡಿ ಎಂದು ಮನವಿ ಮಾಡಿದೆ. ಪರಿಹಾರ ಕೊಡುವುದಿರಲಿ, ಆ ಪುಣ್ಯಾತ್ಮ ಮೋದಿ ತುಟಿಯನ್ನೂ ಬಿಚ್ಚಲಿಲ್ಲ. ಕೊನೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಮೇಲೆ ಪ್ರತಿ ಮರಕ್ಕೆ ₹ 500ರಂತೆ ಎಕರೆಗೆ 20 ಸಾವಿರ ಪರಿಹಾರ ಘೋಷಿಸಿದ್ದಾರೆ. ಅದಕ್ಕಾಗಿ ₹ 200 ಕೋಟಿ ನೀಡಿದ್ದಾರೆ.
ತುಮಕೂರು ಜಿಲ್ಲೆಗೆ ನಿಮ್ಮ ಆದ್ಯತೆ ಯೋಜನೆಗಳೇನು?
ಬೃಹತ್ ಕೈಗಾರಿಕೆಗಳ ಸ್ಥಾಪನೆ ಮೂಲಕ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಗೆ ಹಾಗೂ ದಾವಣಗೆರೆ ಮತ್ತು ರಾಯದುರ್ಗ ರೈಲು ಮಾರ್ಗಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಒತ್ತು ನೀಡುತ್ತೇನೆ.
ಕ್ಷೇತ್ರದಲ್ಲಿ ಅಹಿಂದ ಮತಗಳು ನಿರ್ಣಾಯಕವಾಗಿವೆ. ಅವರ ಮನವೊಲಿಕೆಗೆ ಯಾವ ರೀತಿಯ ಪ್ರಯತ್ನ ಮಾಡುತ್ತಿದ್ದೀರಿ?
ನನಗೆ ಜಾತಿ ರಾಜಕಾರಣದಲ್ಲಿ ನಂಬಿಕೆ ಇಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮುಸ್ಲಿಮರು, ಹಿಂದುಳಿದವರು ಮತ್ತು ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಿದೆ. ಅದರ ಫಲಾನುಭವ ಪಡೆದವರು ನನ್ನನ್ನು ಮರೆಯುವುದಿಲ್ಲ ಎಂದುಕೊಂಡಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.