ADVERTISEMENT

ಶೇ 40ರಷ್ಟು ಬಿತ್ತನೆ: ಬಾಡುತ್ತಿದೆ ರಾಗಿ, ನವಣೆ

ಹುಳಿಯಾರು: ಮಳೆ ಕೊರತೆ, ಮುಗಿದಿದೆ ಬಿತ್ತನೆ ಅವಧಿ

ಆರ್.ಸಿ.ಮಹೇಶ್
Published 26 ಆಗಸ್ಟ್ 2023, 6:11 IST
Last Updated 26 ಆಗಸ್ಟ್ 2023, 6:11 IST
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಲ್ಲದೆ ರಾಗಿ ಬೆಳೆ ಒಣಗುತ್ತಿದೆ
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಲ್ಲದೆ ರಾಗಿ ಬೆಳೆ ಒಣಗುತ್ತಿದೆ   

ಹುಳಿಯಾರು: ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಆಗಸ್ಟ್‌ ಮುಗಿಯುತ್ತಾ ಬಂದರೂ ಮಳೆ ಬಾರದೆ ರಾಗಿ, ನವಣೆಯಂತಹ ಬೆಳೆ ಸಂಪೂರ್ಣ ಒಣಗುತ್ತಿವೆ.

ಪ್ರಸ್ತುತ ವರ್ಷ ಪೂರ್ವ ಮುಂಗಾರು ಬಿತ್ತನೆಗೆ ಮಳೆ ಬಾರದೆ ಹೆಸರು ಬಿತ್ತನೆಗೆ ಹಿನ್ನಡೆಯಾಗಿತ್ತು. ಪೂರ್ವ ಮುಂಗಾರು ಬಿತ್ತನೆ ನಂತರ ರೋಹಿಣಿ ಮಳೆ ಆರಂಭದಲ್ಲಿಯೇ ಬಂದು ರೈತರಲ್ಲಿ ಕೃಷಿ ಚಟುವಟಿಕೆ ಆರಂಬಿಸಲು ಅನುವು ಮಾಡಿಕೊಟ್ಟಿತ್ತಾದರೂ ನಂತರ ಮಳೆ ಸುಳಿಯಲೇ ಇಲ್ಲ. ಜುಲೈ ತಿಂಗಳು ರಾಗಿ ಬಿತ್ತನೆಗೆ ಸಕಾಲವಾಗಿದ್ದು ಆಗಲೂ ಮಳೆ ಬರಲಿಲ್ಲ.

ಆಗಸ್ಟ್‌ ಮುಗಿಯತ್ತಾ ಬಂದಿದ್ದು ಮಳೆ ಬಾರದೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ತಿಂಗಳ ಹಿಂದೆ ತಾಲ್ಲೂಕಿನ ಕೆಲಕಡೆ ಬಿದ್ದ ಸೋನೆ ಮಳೆಗೆ ರೈತರು ರಾಗಿ ಬಿತ್ತನೆ ಮಾಡಿದ್ದರು. ರಾಗಿ, ನವಣೆ ಇತರ ಬೆಳೆಗಳು ಬಿತ್ತನೆ ಮಾಡಿದಾಗಿನಿಂದ ಹದ ಮಳೆ ಬಾರದ ಕಾರಣ ಪೈರು ಒಣಗುತ್ತಿದೆ. ಕೆಲಕಡೆ ನಾಟಿ ಮಾಡುವ ಪರಿಪಾಠವಿದ್ದು ಸೋನೆ ಮಳೆಗೆ ಸಸಿ ಮಡಿಯಲ್ಲಿನ ರಾಗಿ ಪೈರಿಗೆ ಕಾಲ ಮಿಂಚಿ ಒಣಗುತ್ತಿದೆ. ಇದರಿಂದ ಬೇಸತ್ತ ರೈತರು ಸಸಿ ಮಡಿಗಳಿಗೆ ದನಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.

ADVERTISEMENT

ತಾಲ್ಲೂಕು ವ್ಯಾಪ್ತಿಯಲ್ಲಿ ಶೇ 40ರಷ್ಟು ಮಾತ್ರ ಬಿತ್ತನೆಯಾಗಿದ್ದು, ಅದೂ ಕೂಡ ಒಣಗಿ ಹೋಗುತ್ತಿದೆ. ರಾಗಿ ಬಿತ್ತನೆ ಕಾಲ ಮುಗಿದಿದ್ದು, ಈಗ ಮಳೆ ಬಂದರೂ ಬಿತ್ತನೆ ಸಾಧ್ಯವಿಲ್ಲ ಎನ್ನುತ್ತಾರೆ ರೈತರು.

ಮೇವು ಕೊರತೆ: ಸದ್ಯ ರೈತರಿಗೆ ಮೇವಿನ ಕೊರತೆ ಎದುರಾಗಿದ್ದು ಜಾನುವಾರುಗಳನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಆತಂಕ ಎದುರಾಗಿದೆ. ಕಳೆದ ವರ್ಷಗಳಲ್ಲೂ ಮೇವು ದಾಸ್ತಾನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ರೈತರ ಬಳಿ ಮೇವು ಮುಗಿದಿದ್ದು ರಾಸುಗಳನ್ನು ಮುಂದಿನ ಕೃಷಿ ಚಟುವಟಿಕೆಗಳಿಗೆ ಉಳಿಸಿಕೊಳ್ಳುವುದು ಸವಾಲಾಗಿದೆ. ಕೆಲಕಡೆ ರೈತರು ಗುಡ್ಡಗಳಲ್ಲಿ ಹುಲ್ಲು ಕೊಯ್ಲು ಮಾಡಲು ಮುಂದಾಗಿದ್ದಾರೆ. ಆದರೆ ಗುಡ್ಡಗಳಿಗೆ ಬಿದ್ದ ಬೆಂಕಿಯಿಂದ ಅಲ್ಲಿಯೂ ಹುಲ್ಲಿನ ಲಭ್ಯತೆ ಕಡಿಮೆ ಇದೆ.

ಗುಂಡಯ್ಯ
ಕೆಂಕೆರೆ ಸತೀಶ್‌

ಬಿಸಿಲ ತಾಪ ಹೆಚ್ಚಳ

ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ರಾಗಿ ಮತ್ತಿತರ ಬೆಳೆಗಳಿಗೆ ಮಳೆಯಿಲ್ಲದೆ ಬಿಸಿಲ ತಾಪ ಹೆಚ್ಚಾಗಿ ಬಿಳಿ ಪೊರೆ ಅಡರುತ್ತಿದೆ. ಬೇರುಗಳು ಸಹ ಒಣಗುತ್ತಿರುವುದರಿಂದ ಪೈರು ಸಾಯುತ್ತಿದೆ. ಹದ ಮಳೆ ಬಾರೆದೆ ಬಿತ್ತನೆಗೂ ಹಿನ್ನಡೆಯಾಗಿದೆ. ಅಲ್ಲಲ್ಲಿ ಬಿತ್ತಿದ ಬೆಳೆ ಸಂಪೂರ್ಣ ಒಣಗುತ್ತಿದೆ. ಐದಾರು ವರ್ಷಗಳಿಂದ ಜನರಿಗೆ ಕಾಳು ರಾಸುಗಳಿಗೆ ಮೇವಿಲ್ಲದೆ ಪರದಾಡುವಂತಾಗಿದೆ. ಗುಂಡಯ್ಯ ಸೋಮನಹಳ್ಳಿ ಬರಗಾಲ ಘೋಷಿಸಿ ಈಗಾಗಲೇ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಇಲ್ಲದೆ ಬೆಳೆ ಹಾನಿಯಾಗಿದೆ. ರೈತರು ತಮ್ಮ ಆಹಾರ ಹಾಗೂ ರಾಸುಗಳ ಮೇವಿಗೆ ಪರದಾಡುವಂತಾಗಿದೆ. ಕೂಡಲೇ ಸರ್ಕಾರ ತಾಲ್ಲೂಕನ್ನು ಬರಗಾಲ ಪಟ್ಟಿಗೆ ಸೇರಿಸಬೇಕು ಕೆಂಕೆರೆ ಸತೀಶ್‌ ಉಪಾಧ್ಯಕ್ಷ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.