ADVERTISEMENT

1,138 ಜನವಸತಿ ಪ್ರದೇಶಗಳಿಗೆ ನೀರು

ತುಂಗಭದ್ರಾ ಯೋಜನೆ ಕಾಮಗಾರಿ ವೀಕ್ಷಣೆ: ಸಚಿವ ಪ್ರಿಯಾಂಕ ಖರ್ಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:10 IST
Last Updated 11 ಜುಲೈ 2024, 6:10 IST
ಪಾವಗಡ ತಾಲ್ಲೂಕು ನಿಡಗಲ್ ಬಳಿಯ ನೀರು ಸಂಗ್ರಹಾಗಾರ ಕಾಮಗಾರಿಯನ್ನು ಸಚಿವ ಪ್ರಿಯಾಂಕ ಖರ್ಗೆ ಪರಿಶೀಲಿಸಿದರು
ಪಾವಗಡ ತಾಲ್ಲೂಕು ನಿಡಗಲ್ ಬಳಿಯ ನೀರು ಸಂಗ್ರಹಾಗಾರ ಕಾಮಗಾರಿಯನ್ನು ಸಚಿವ ಪ್ರಿಯಾಂಕ ಖರ್ಗೆ ಪರಿಶೀಲಿಸಿದರು   

ಪಾವಗಡ: ತಾಲ್ಲೂಕಿನಲ್ಲಿ ತುಂಗಭದ್ರಾ ಯೋಜನೆ ಕಾಮಗಾರಿ ಪ್ರಗತಿಯ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಬುಧವಾರ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ನಿಡಗಲ್ ಬೆಟ್ಟದ ಬಳಿ ನಿರ್ಮಾಣವಾಗಿರುವ 13 ಲಕ್ಷ ಲೀಟರ್ ನೀರು ಸಂಗ್ರಹಾಗಾರ (ಎಂಬಿಆರ್ 2) ವನ್ನು ಪರಿಶೀಲಿಸಿದರು.

ಅಧಿಕಾರಿಗಳು ಯೋಜನೆಯ ವಿವಿಧ ಕಾಮಗಾರಿ, ನಕ್ಷೆಯನ್ನು ಸಚಿವರಿಗೆ ವಿವರಿಸಿದರು.

ADVERTISEMENT

ತಾಲ್ಲೂಕಿನ ಗಡಿಯಲ್ಲಿರುವ ಕೆಂಚಮ್ಮನಹಳ್ಳಿ ಗೇಟ್ ಬಳಿಯ ಬೃಹತ್ ಪಂಪ್‌ಹೌಸ್‌ಗೆ ಭೇಟಿ ನೀಡಿ ಕಾರ್ಯವಿಧಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಯೋಜನೆಯ ಮೂಲಕ ಸುಮಾರು ₹2,132 ಕೋಟಿ ವೆಚ್ಚದಲ್ಲಿ 1,138 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲಾಗುವುದು. ಕಳೆದ ಸರ್ಕಾರಗಳು ಯೋಜನೆಯ ವಿನ್ಯಾಸಕ್ಕಾಗಿಯೇ ಎರಡು ವರ್ಷ ಕಾಲಹರಣ ಮಾಡಿವೆ. ತಡ ಆದರೂ ಕಡೆಯ ಗ್ರಾಮಗಳಿಗೂ ಗುಣಮಟ್ಟದ ನೀರು ಪೂರೈಸುವ ಗುರಿ ಇದೆ ಎಂದರು.

ಯೋಜನೆಯ ವ್ಯಾಪ್ತಿ 2,500 ಕಿ.ಮೀ ಇದೆ. ಪ್ರಾಯೋಗಿಕವಾಗಿ ನೀರು ಹರಿಸಿ ಪರಿಶೀಲನೆ ನಡೆಸಿದ ನಂತರ ಎರಡು ತಿಂಗಳೊಳಗಾಗಿ ತಾಲ್ಲೂಕಿಗೆ ಕುಡಿಯುವ ನೀರು ಹರಿಯಲಿದೆ. ಯೋಜನೆಯ ಎಂಜಿನಿಯರ್, ಗುತ್ತಿಗೆದಾರರು, ಶಾಸಕರ ಸಭೆ ಕರೆದು ಚರ್ಚಿಸಲಾಗುವುದು. ನೀರಿನ ಪ್ರಮಾಣ ಹೆಚ್ಚಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಇಲಾಖೆ ದೊಡ್ಡ ಮಟ್ಟದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ರಾಜ್ಯದಾದ್ಯಂತ ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜಲಮೂಲ ಸಂರಕ್ಷಿಸುವ, ಪುನಶ್ಚೇತನಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ. ಜಲ ಜೀವನ್ ಮೆಷನ್ ಯೋಜನೆ ಅಡಿ ಸಮರ್ಪಕವಾಗಿ ಕೆಲಸ ಮಾಡದವರ ಬಿಲ್ ತಡೆ ಹಿಡಿಯಲಾಗಿದೆ. ಕಾಮಗಾರಿ ಪೂರ್ಣಗೊಳಿಸಿದವರಿಗೆ ಫುರ್ಣಪ್ರಮಾಣದ ಬಿಲ್ ಪಾವತಿ ಮಾಡಲಾಗಿದೆ ಎಂದರು.

ಶಾಸಕ ಎಚ್.ವಿ. ವೆಂಕಟೇಶ್, ರಘುಮೂರ್ತಿ, ಮಾಜಿ ಸಚಿವ ವೆಂಕಟರಮಣಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಜಿ. ಪ್ರಭು, ನಾಗೇಂದ್ರರಾವ್ ನಾನಿ, ಪುರಸಭೆ ಸದಸ್ಯ ಸುದೇಶ್ ಬಾಬು, ಪಿ.ಎಚ್. ರಾಜೇಶ್, ತೆಂಗಿನಕಾಯಿ ರವಿ, ತಿಪ್ಪೇಸ್ವಾಮಿ, ಎಂಜಿನಿಯರ್‌ಗಳು, ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.