ADVERTISEMENT

ಅನುದಾನ ಬಿಡುಗಡೆಗೂ ಕಮಿಷನ್‌: ಗುತ್ತಿಗೆದಾರರ ಸಂಘ

ಗುತ್ತಿಗೆದಾರರ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 20:22 IST
Last Updated 3 ಜನವರಿ 2023, 20:22 IST
ಎ.ಡಿ.ಬಲರಾಮಯ್ಯ
ಎ.ಡಿ.ಬಲರಾಮಯ್ಯ   

ತುಮಕೂರು: ‘ಸರ್ಕಾರದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ. ಅನೇಕ ಸಂದರ್ಭದಲ್ಲಿ ಶೇ 6ರಿಂದ ಶೇ 10ರಷ್ಟು ಕಮಿಷನ್‌ ಕೊಡಬೇಕಿದೆ’ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಬಲರಾಮಯ್ಯ ಆರೋಪಿಸಿದ್ದಾರೆ.

‘ರಾಜಕಾರಣಿಗಳಿಂದ ಹಿಡಿದು ಇಲಾಖೆಯಲ್ಲಿ ಚೆಕ್ ಬರೆಯುವ ಹಂತದವರೆಗೆ ಲಂಚ ಕೇಳುವುದು ಹಕ್ಕು ಎಂದುಕೊಂಡಿದ್ದಾರೆ‌. ಪ್ರತಿ ಇಲಾಖೆ ಯಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ’ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ₹10 ರಿಂದ ₹15 ಕೋಟಿ ನೀಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರ ಗಳಿಗೆ ಹಣ ಕೊಡುವುದಿಲ್ಲ. ಹಣ ಕೊಟ್ಟವರಿಗೆ ಗುತ್ತಿಗೆ ನೀಡಿ, ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದೆ ಜನಸಂಖ್ಯೆ, ಭೌಗೋಳಿಕ ಆಧಾರದ ಮೇಲೆ ಹಣ ಬಿಡುಗಡೆ ಮಾಡುತ್ತಿದ್ದರು’ ಎಂದರು. ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆಯ ಭರವಸೆ ಪತ್ರ (ಎಲ್‌ಒಸಿ) ನೀಡಬೇಕು. ಜಿಎಸ್‌ಟಿ ಪ್ರಮಾಣವನ್ನು ಶೇ 18ರಿಂದ ಶೇ 12ಕ್ಕೆ ಇಳಿಸಬೇಕು. ಟೆಂಡರ್‌ ಪ್ರಕ್ರಿಯೆ
ಯಲ್ಲಿ ಪಾರದರ್ಶಕತೆ ತರಬೇಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಜ.10ರಂದು ಹೋರಾಟ ಮಾಡಲಾಗುತ್ತಿದೆ ಎಂದರು.

ADVERTISEMENT

ಸಂಘದ ಪದಾಧಿಕಾರಿಗಳಾದ ಸುರೇಶ್‌ಕುಮಾರ್‌, ಕೋದಂಡರಾಮು, ಶಶಿಧರ್‌, ಬಿ.ಆರ್‌.ವೇಣುಗೋಪಾಲ್‌ ಕೃಷ್ಣ ಇದ್ದರು.

ಜ.10ರಂದು ಪ್ರತಿಭಟನೆ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನ ವಿರೋಧಿಸಿ, ಗುತ್ತಿಗೆದಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುತ್ತಿಗೆದಾರರ ಸಂಘದಿಂದ ಜ.10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.