ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಅಂಗವಿಕಲರ ವೀಲ್‌ಚೇರ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ, ಜಿಲ್ಲಾ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಎರಡು ದಿನಗಳ ಕಾಲ ಕ್ರೀಡಾಕೂಟ ಏರ್ಪಡಿಸಲಾಗಿದೆ. ತುಮಕೂರು, ಬಳ್ಳಾರಿ, ಬೆಂಗಳೂರು, ಬೆಳಗಾವಿಯ ಕ್ರೀಡಾಪಟುಗಳ ಭಾಗವಹಿಸಿದ್ದರು.
ಅಂತರರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ ಒಟ್ಟು 70 ಮಂದಿ ಪಂದ್ಯಾವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಲ್ಕು ತಂಡಗಳು ಭಾಗವಹಿಸಿರುವ ಈ ಟೂರ್ನಿಯ ಮೊದಲ ವಿಜೇತರಿಗೆ ₹20 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ಎರಡನೇ ಬಹುಮಾನವಾಗಿ ₹10 ಸಾವಿರ ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ.
ಅಂಗವಿಕಲರ ಕ್ರೀಡಾ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಸಲುವಾಗಿ ಈ ಟೂರ್ನಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಂದ್ಯಾವಳಿಗಳನ್ನು ನಡೆಸುವ ಗುರಿ ಇದೆ ಎಂದು ಕ್ರೀಡಾಕೂಟದ ಆಯೋಜಕಿ ನಿವೇದಿತಾ ತಿಳಿಸಿದರು.
ಮುಖಂಡ ಧನಿಯಾಕುಮಾರ್, ‘ವಿವಿಧ ಕ್ರೀಡಾ ಸಂಸ್ಥೆಗಳ ಸಹಕಾರದೊಂದಿಗೆ ದಿವ್ಯಾಂಗ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಎಲ್ಲವೂ ಸರಿ ಇರುವವರೆ ಇಂದು ಮೊಬೈಲ್‍ಗೆ ಅಂಟಿಕೊಂಡು ಕುಳಿತಿದ್ದಾರೆ. ಇಂತಹ ಸಮಯದಲ್ಲಿ ವೀಲ್‍ಚೇರ್ ಮೇಲೆ ಕುಳಿತು ಕ್ರಿಕೆಟ್ ಆಡುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.