ADVERTISEMENT

ಗುಡುಗಿದ ಮಾಧುಸ್ವಾಮಿ: ಸಿ.ಎಂ ಮೇಲೆ ಇಷ್ಟೊಂದು ಸಿಟ್ಟೇಕೆ?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ ಮಾಧುಸ್ವಾಮಿ

ಕೆ.ಜೆ.ಮರಿಯಪ್ಪ
Published 18 ಮೇ 2021, 19:30 IST
Last Updated 18 ಮೇ 2021, 19:30 IST
ಅಕ್ಕಪಕ್ಕದಲ್ಲಿ ಜೆ.ಸಿ.ಮಾಧುಸ್ವಾಮಿ– ಬಿ.ಎಸ್.ಯಡಿಯೂರಪ್ಪ
ಅಕ್ಕಪಕ್ಕದಲ್ಲಿ ಜೆ.ಸಿ.ಮಾಧುಸ್ವಾಮಿ– ಬಿ.ಎಸ್.ಯಡಿಯೂರಪ್ಪ   

ತುಮಕೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಇಷ್ಟೊಂದು ಸಿಟ್ಟೇಕೆ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಮುಖ್ಯಮಂತ್ರಿ ಜತೆ ವಿಡಿಯೊ ಸಂವಾದದಲ್ಲಿ ತಮ್ಮ ಸಿಟ್ಟನ್ನು ಜೋರಾಗಿಯೇ ತೋರ್ಪಡಿಸಿದ್ದಾರೆ. ನಮ್ಮನ್ನು ಏನಂದುಕೊಂಡಿದ್ದೀರಿ ಎಂಬ ಧಾಟಿಯಲ್ಲೇ ಮಾತನಾಡಿದ್ದಾರೆ. ‘ಮೊದಲು ಸಮಸ್ಯೆಗೆ ಸ್ಪಂದಿಸಿ. ನಿಮ್ಮ ಅಕ್ಕಪಕ್ಕದವರಿಗೆ ಉದಾರವಾಗಿ ವರ್ತಿಸಲು ಹೇಳಿ. ಒಮ್ಮೆ ಅದು ಮಾಡಿ ಎನ್ನುತ್ತೀರಿ, ಇನ್ನೊಮ್ಮೆ ಮಾಡಬೇಡಿ ಎನ್ನುತ್ತೀರಿ. ನಾವು ಯಾವ ರೀತಿ ಕೆಲಸ ಮಾಡಬೇಕು’ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಸಚಿವರಿಂದ ಇಷ್ಟೊಂದು ತೀಕ್ಷ್ಣ ಪ್ರತಿಕ್ರಿಯೆ ನಿರೀಕ್ಷಿಸದಿದ್ದ ಮುಖ್ಯಮಂತ್ರಿ ಸಹ ಒಮ್ಮೆ ಅವಕ್ಕಾದರು.

ಈ ಸಿಟ್ಟು ಇಂದು, ನಿನ್ನೆಯದಲ್ಲ. ಸಚಿವ ಸ್ಥಾನ ಬದಲಾವಣೆ ಸಮಯದಲ್ಲಿ ಮೂಗಿನ ಮೇಲೆ ಬಂದು ಕುಳಿತಿದ್ದ ಕೋಪ ಈಗ ಮಾತಿನ ಮೂಲಕ ಹೊರಕ್ಕೆ ಬಂದಿದೆ. ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಕಾನೂನು ಹಾಗೂ ಸಂಸದೀಯ, ಸಣ್ಣ ನೀರಾವರಿ ಖಾತೆ ಬದಲಿಸಲಾಯಿತು. ಎರಡು ದಿನಗಳ ಅಂತರದಲ್ಲಿ ಮೂರು ಬಾರಿ ಖಾತೆ ಬದಲಾವಣೆ ಮಾಡಲಾಯಿತು. ಪದೇಪದೇ ಖಾತೆ ಬದಲಿಸಿದ್ದರಿಂದ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದರು. ಕೊನೆಗೆ ಎಲ್ಲಾ ಖಾತೆಗಳನ್ನು ವಾಪಸ್ ಪಡೆದು ಸಣ್ಣ ನೀರಾವರಿ ಖಾತೆ ಉಳಿಸಲಾಯಿತು.

ADVERTISEMENT

ಅಂತರ್ಜಲ ಸಂರಕ್ಷಿಸಲು ಜಾರಿಗೆ ತಂದಿರುವ ‘ಅಟಲ್ ಭೂ ಜಲ್’ ಯೋಜನೆ ಜಾರಿ ಹೊಣೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲೇಇದ್ದುದರಿಂದ ಖಾತೆ ಬದಲಾವಣೆಯನ್ನು ಹೇಗೋ ಸಹಿಸಿಕೊಂಡು ಸುಮ್ಮನಾಗಿದ್ದರು. ನಂತರ ಜಿಲ್ಲೆಯ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸ್ಪಂದಿಸದಿರುವುದು, ಸಚಿವರು ಸಹ ಮಾಧುಸ್ವಾಮಿ ಮಾತಿಗೆ ಮಣೆ ಹಾಕದಿರುವ ಕೋಪ ಹೆಚ್ಚಿಸಿತು. ಆ ಸಿಟ್ಟು ದಿನಗಳು ಕಳೆದಂತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಾ ಸಾಗಿದೆ. ಈಗಿನ ಬೆಳವಣಿಗೆ ಗಮನಿಸಿದರೆ ಇದು ಮತ್ತಷ್ಟು ಬಿರುಸಾಗುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂಚೂಣಿ ಸ್ಥಾನ: ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಮುಖಂಡರ ಜತೆಗೆ ಮಾಧುಸ್ವಾಮಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದ್ದರು. ಯಡಿಯೂರಪ್ಪ ಅಕ್ಕಪಕ್ಕದಲ್ಲೇ ಕುಳಿತು ಪಕ್ಷವನ್ನು ಸಮರ್ಥಿಸಿಕೊಂಡು, ಆಡಳಿತ ಪಕ್ಷದವರನ್ನು ಮಾತಿನಲ್ಲೇ ಕಟ್ಟಿಹಾಕುತ್ತಿದ್ದರು. ಸಮ್ಮಿಶ್ರ ಸರ್ಕಾರದ ಪತನದ ಸಮಯದಲ್ಲೂ ‘ಪಕ್ಷದ ನಡೆ’ಯನ್ನು ಬೆಂಬಲಿಸಿ ಯಡಿಯೂರಪ್ಪ ಬೆನ್ನಿಗೆ ನಿಂತರು. ಹೊಸ ಸರ್ಕಾರ ರಚನೆಯಾದ ನಂತರವೂ ಸಚಿವರಾಗಿ ಸರ್ಕಾರ ಮುನ್ನಡೆಸಿದ್ದರು.ಸದನದಲ್ಲಿ ವಿರೋಧ ಪಕ್ಷದವರು ಬೀಸಿದ ಚಾಟಿಗೆ ಎದುರೇಟು ನೀಡುತ್ತಿದ್ದರು.

ಬದಲಾದ ನಿಲುವು: ಸಚಿವ ಸಂಪುಟ ಪುನರ್ ರಚನೆ ವೇಳೆಗೆ ಸಚಿವ ಸ್ಥಾನದಿಂದ ಕೈಬಿಡುವಂತೆ ಆರ್‌ಎಸ್‌ಎನ್ ನಾಯಕರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಲಾರಂಭಿಸಿದರು. ಆರ್‌ಎಸ್‌ಎಸ್ ಮಾತು ಕೇಳುತ್ತಿಲ್ಲ. ಕನಿಷ್ಠ ಸ್ಪಂದನೆಯೂ ಇಲ್ಲವಾಗಿದೆ. ಪಕ್ಷದ ಕಾರ್ಯಕರ್ತರಿಗೂ ಸ್ಪಂದಿಸುವುದಿಲ್ಲ ಎಂಬ ಆರೋಪ ಕೇಳಿಬಂತು. ಮುಖ್ಯಮಂತ್ರಿ ಮೇಲೆ ಒತ್ತಡ ಹೆಚ್ಚಾದಾಗ ಸಚಿವ ಸಂಪುಟದಿಂದ ಕೈಬಿಡುವ ಬದಲು ಕಾನೂನು ಹಾಗೂ ಸಂಸದೀಯ ವ್ಯವಹಾರದಂತಹ ಮಹತ್ವದ ಖಾತೆಯನ್ನು ವಾಪಸ್ ಪಡೆದರು. ಸಣ್ಣ ಪುಟ್ಟ ಖಾತೆಗಳನ್ನು ನೀಡಿದರು. ಪದೇಪದೇ ಖಾತೆ ಬದಲಿಸಿದ್ದು ಮಾಧುಸ್ವಾಮಿ ಸಿಟ್ಟು ಜೋರಾಗಲು ಕಾರಣವಾಯಿತು.

ಬದಲಾದ ಸನ್ನಿವೇಶದಲ್ಲಿ ಪಕ್ಷದಲ್ಲೂ ಹಿನ್ನಡೆ ಅನುಭವಿಸಬೇಕಾಯಿತು. ಪಕ್ಷದಲ್ಲೂ ಇವರ ಮಾತು ನಡೆಯದಾಯಿತು. ಮುಖ್ಯಮಂತ್ರಿ ಅಕ್ಕಪಕ್ಕ ಇದ್ದವರು ಅಲ್ಲಿಂದ ದೂರ ಸರಿಯಬೇಕಾಯಿತು. ಸದನದಲ್ಲೂ ಮೊದಲ ಸಾಲಿನಿಂದ ಹಿಂದಿನ ಸಾಲಿಗೆ ಸ್ಥಳಾಂತರಗೊಂಡರು. ಒಂದು ರೀತಿಯಲ್ಲಿ ಎಲ್ಲಾ ಹಂತ, ಸನ್ನಿವೇಶದಲ್ಲೂ ಹಿನ್ನಡೆ ಅನುಭವಿಸಬೇಕಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಜಿಲ್ಲೆಯ ಸಮಸ್ಯೆಗಳಿಗೆ, ಕೋವಿಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರು ಸ್ಪಂದಿಸುತ್ತಿಲ್ಲ. ಆಮ್ಲಜನಕದ ಹೆಚ್ಚುವರಿ ಬೇಡಿಕೆ ಸಲ್ಲಿಸಿದಾಗ ಕೊಡುವುದಾಗಿ ಭರವಸೆ ನೀಡಿದರೂ ಈವರೆಗೂ ಕೊಟ್ಟಿಲ್ಲ. ಸ್ಥಳೀಯ ಮುಖಂಡರೊಬ್ಬರು ಜಿಲ್ಲೆಗೆ ಅಮ್ಲಜನಕ ಕೊಡಿಸಿ ಎಂದು ಸಚಿವರಿಗೆ ದೂರವಾಣಿ ಕರೆ ಮಾಡಿದ ಸಮಯದಲ್ಲೂಇದೇ ಕಾರಣಕ್ಕೆ ‘ಮುಖ್ಯಮಂತ್ರಿ ಕೇಳಿ’ ಎಂದು ಉತ್ತರಿಸಿದ್ದರು. ಜಿಲ್ಲೆ ‘ಕೆಂಪು ವಲಯ’ದಲ್ಲಿ ಇದ್ದು, ನಿಯಂತ್ರಿಸಿ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಬೇಕಾದ ಸೌಲಭ್ಯ ಹಾಗೂ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ಮಾಧುಸ್ವಾಮಿ ಅವರ ಸಿಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಪಕ್ಷ ಹಾಗೂ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.