ಹುಳಿಯಾರು: ಹೋಬಳಿ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಕಾಡುಹಂದಿ ಹಾವಳಿ ಹೆಚ್ಚಾಗಿದ್ದು, ನೂರಾರು ಕೃಷಿಕರು ಕಂಗೆಟ್ಟಿದ್ದಾರೆ. ಹೊಲಗಳಲ್ಲಿನ ಬೆಳೆಗಳಿಗೆ ಹಾನಿ ಮಾಡುತ್ತಿದ್ದ ಕಾಡುಹಂದಿಗಳು ಇದೀಗ ತೆಂಗು ಬೆಳೆಗಾರರನ್ನು ಬಾಧಿಸುತ್ತಿವೆ.
ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳ ಪಕ್ಕದಲ್ಲಿ ಅರಣ್ಯ ಪ್ರದೇಶವಿದ್ದು ಗುಡ್ಡಗಳು ಸಹ ಹೊಂದಿಕೊಂಡಿವೆ. ಬೋರನಕಣಿವೆ ಜಲಾಶಯ ಸೇರಿದಂತೆ ಹತ್ತಾರು ನೀರು ತಂಬಿರುವ ಕೆರೆ ಹಾಗೂ ಖಾಲಿ ಕೆರೆಗಳು ಇವೆ. ಇವುಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿರುವ ಕಾಡುಹಂದಿಗಳು ಸಂಜೆಯಾದೊಡನೆ ರೈತರ ತೋಟಗಳಿಗೆ ಲಗ್ಗೆಯಿಡುತ್ತವೆ.
ನಾಲ್ಕೈದು ವರ್ಷಗಳ ತೆಂಗು, ಅಡಿಕೆ ಸೇರಿದಂತೆ ಬಾಳೆಯನ್ನು ನಾಶ ಮಾಡುವುದರ ಜತೆ ಮರಗಳಿಂದ ಬಿದ್ದ ಕಾಯಿಗಳನ್ನು ಸುಲಿದು ತಿನ್ನುತ್ತಿವೆ. ತೋಟಗಳಲ್ಲಿ ರಾತ್ರಿ ವೇಳೆ ಬೀಳುವ ಕಾಯಿ ತಿಂದು ಹಾಕುತ್ತಿವೆ. ಅನಿವಾರ್ಯ ಕಾರಣಗಳಿಂದ ರೈತರು ಕಾಯಿಗಳನ್ನು ಕಿತ್ತು ತೋಟಗಳಲ್ಲಿ ಬಿಟ್ಟರೆ ಮುಗಿದೇ ಹೋಯಿತು. ಗುಂಪು ಗುಂಪಾಗಿ ಬಂದು ತೆಂಗಿನ ಕಾಯಿಗಳನ್ನು ತಿಂದು ಮುಗಿಸುತ್ತವೆ.
ತೋಟಗಳಲ್ಲಿ ಬೆಳೆಯುವ ಮಿಡಿಸೌತೆ ಹಾಗೂ ತರಕಾರಿ ಬೆಳೆಗಳನ್ನು ನಾಶ ಮಾಡುತ್ತವೆ. ಕಾಡುಹಂದಿಗಳು ರೈತರ ಹೊಲಗದ್ದೆಗಳಲ್ಲಿ ಬೆಳೆಗಳಿಗೆ ತಿವಿದು ನಾಶ ಮಾಡುವುದು ರೈತರ ಬದುಕಿನ ಮೇಲೆ ತಿವಿದಷ್ಟು ನೋವಾಗುತ್ತಿದೆ ಎಂದು ರೈತರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಕಾಡುಹಂದಿಗಳ ಕಾಟದ ನಿಯಂತ್ರಣಕ್ಕೆ ರೈತರ ಬಳಿ ಯಾವುದೇ ಮಾರ್ಗೋಪಾಯಗಳಿಲ್ಲ.
ರೈತರಿಗೆ ದಕ್ಕದ ಪರಿಹಾರ
ಕಾಡುಹಂದಿ ಹಾವಳಿಗೆ ತುತ್ತಾದ ರೈತರು ಅರಣ್ಯ ಇಲಾಖೆಯ ಮೊರೆ ಹೋಗಿ ಪರಿಹಾರ ಪಡೆಯುವ ಅವಕಾಶವಿದೆ. ಆದರೆ ಒಂದು ದಿನ ಒಂದಿಬ್ಬರ ತೋಟದಲ್ಲಿ ಕಾಯಿ ತಿಂದು ನಾಪತ್ತೆ ಆಗುತ್ತವೆ. ಇಂತಹ ಸಮಯದಲ್ಲಿ ರೈತರು ಪರಿಹಾರ ಪಡೆಯುವುದು ಕಷ್ಟವಾಗುತ್ತದೆ ಎಂದು ತೆಂಗು ಬೆಳೆಗಾರು ನೋವು ತೋಡಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.