ADVERTISEMENT

ತುಮಕೂರಿಗೆ ಮೆಟ್ರೋ: ಬಜೆಟ್‌ನಲ್ಲಿ ಪ್ರಸ್ತಾಪವಾಗುವುದೆ?

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 5:31 IST
Last Updated 13 ಫೆಬ್ರುವರಿ 2024, 5:31 IST
ತುಮಕೂರು ನಗರ (ಸಾಂದರ್ಭಿಕ ಚಿತ್ರ)
ತುಮಕೂರು ನಗರ (ಸಾಂದರ್ಭಿಕ ಚಿತ್ರ)   

ತುಮಕೂರು: ಈ ಬಾರಿಯ ರಾಜ್ಯ ಬಜೆಟ್‌ ಬಗ್ಗೆ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ನಗರದ ಅಭಿವೃದ್ಧಿಗೆ ₹500 ಕೋಟಿ ವಿಶೇಷ ಅನುದಾನ ನೀಡುವಂತೆ ಜನಪ್ರತಿನಿಧಿಗಳು ಒತ್ತಡ ಹಾಕುತ್ತಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗಿದ್ದರೂ ಇಡೀ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಈ ಯೋಜನೆಯಲ್ಲಿ ಕೇವಲ 6 ವಾರ್ಡ್‌ಗಳಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳು ನಡೆದಿವೆ. ಉಳಿದ ಬಡಾವಣೆಗಳು ಇನ್ನೂ ಹಳ್ಳಿಯ ಸ್ಥಿತಿಯಲ್ಲೇ ಇವೆ. ಬೆಂಗಳೂರಿಗೆ ತುಮಕೂರು ಪರ್ಯಾಯ ನಗರವಾಗಿ ಬೆಳವಣಿಗೆ ಕಾಣುತ್ತಿದ್ದು, ನಗರದ ವ್ಯಾಪ್ತಿ ವಿಸ್ತರಣೆಗೆ ಚಾಲನೆ ನೀಡಲಾಗಿದೆ. ಇದು ಸಾಕಾರಗೊಂಡರೆ ಸುತ್ತಮುತ್ತಲಿನ ಮತ್ತಷ್ಟು ಹಳ್ಳಿಗಳು ನಗರದ ಒಡಲಿಗೆ ಸೇರಲಿವೆ. ಅಂತಹ ಹಳ್ಳಿಗಳಿಗೆ ಮೂಲಭೂತ ಸೌಕರ್ಯ ನೀಡಲು ವಿಶೇಷ ಅನುದಾನ ಬೇಕಾಗುತ್ತದೆ.

ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆ ಮಾಡಿ, ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಲು ಈ ಬಾರಿಯ ಬಜೆಟ್‌ನಲ್ಲಿ ₹500 ಕೋಟಿ ವಿಶೇಷ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ನಗರಕ್ಕೆ ವಿಶೇಷ ಅನುದಾನ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ADVERTISEMENT

ವಿ.ವಿ ಕ್ಯಾಂಪಸ್: ವಿಶ್ವವಿದ್ಯಾಲಯ ಆರಂಭವಾಗಿ (2004ರಲ್ಲಿ) ಎರಡು ದಶಕಗಳಿಗೆ ಕಾಲಿಟ್ಟಿದ್ದು, ಈವರೆಗೂ ಸ್ವಂತ ಕ್ಯಾಂಪಸ್ ಹೊಂದಲು ಸಾಧ್ಯವಾಗಿಲ್ಲ. ನಗರದ ಹೊರ ವಲಯದ ಬಿದರೆಕಟ್ಟೆ ಬಳಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಅನುದಾನ ಇಲ್ಲದೆ ಕೆಲವು ಕಟ್ಟಡಗಳ ನಿರ್ಮಾಣಕ್ಕೆ ಸೀಮಿತಗೊಂಡಿದೆ. ಪೂರ್ಣ ಪ್ರಮಾಣದಲ್ಲಿ ಕ್ಯಾಂಪಸ್ ಅಭಿವೃದ್ಧಿಪಡಿಸಲು ₹200 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

ಮೆಟ್ರೋ: ತುಮಕೂರು ವೇಗವಾಗಿ ಬೆಳೆಯುತ್ತಿದ್ದು, ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಮೆಟ್ರೋ ರೈಲು ಯೋಜನೆ ವಿಸ್ತರಿಸುವಂತೆ ಒತ್ತಡ ಹಾಕಲಾಗುತ್ತಿದೆ. ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲೂ ತುಮಕೂರಿಗೆ ಮೆಟ್ರೋ ವಿಸ್ತರಿಸುವ ವಿಚಾರ ಪ್ರಸ್ತಾಪಿಸಲಾಗಿದ್ದು, ಈಗಾಗಲೇ ಯೋಜನಾ ವರದಿ ಸಿದ್ಧಪಡಿಸಲು ಚಾಲನೆ ನೀಡಲಾಗಿದೆ. ಅನುದಾನ ಒದಗಿಸದೆ ಯೋಜನೆಗೆ ಚಾಲನೆ ಸಿಗುವುದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಸ್ವಲ್ಪ ಮಟ್ಟಿಗಾದರೂ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರು ಇದ್ದಾರೆ.

ಆಡಳಿತ ಭವನ: ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಿ ಸಾಕಷ್ಟು ವರ್ಷಗಳಾಗಿದ್ದು, ಇಲ್ಲಿ ಎಲ್ಲಾ ಕಚೇರಿಗಳಿಗೂ ಸ್ಥಳಾವಕಾಶ ಒದಗಿಸಲು ಸಾಧ್ಯವಾಗಿಲ್ಲ. ಇನ್ನೂ ಬಹುತೇಕ ಕಚೇರಿಗಳು ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲವನ್ನೂ ಒಂದೆಡೆಗೆ ತರುವ ಅಗತ್ಯವಿದೆ. ಅದಕ್ಕಾಗಿ ಜಿಲ್ಲಾ ಆಡಳಿತ ಭವನ ನಿರ್ಮಾಣಕ್ಕೆ ₹100 ಕೋಟಿ ಅನುದಾನ ನೀಡುವಂತೆ ಕೇಳಿಕೊಳ್ಳಲಾಗಿದೆ.

**

ಇತರೆ ಪ್ರಮುಖ ಬೇಡಿಕೆಗಳು

* ಜಿಲ್ಲೆಯಲ್ಲಿ ಅತಿ ಹೆಚ್ಚು ತೆಂಗು ಬೆಳೆಯುತ್ತಿದ್ದು, ‘ತೆಂಗು ಪಾರ್ಕ್’ ನಿರ್ಮಾಣದ ಬೇಡಿಕೆಯನ್ನು ಈಡೇರಿಸಬೇಕು. ಪ್ರತಿ ಬಾರಿಯೂ ಬಜೆಟ್‌ನಲ್ಲಿ ಪ್ರಸ್ತಾಪಿಸಲಷ್ಟೇ ಸೀಮಿತಗೊಂಡಿದ್ದು, ತೆಂಗು ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ತೆಂಗು ಉತ್ಪನ್ನಗಳನ್ನು ತಯಾರಿಸುವ ಸಣ್ಣ ಉದ್ಯಮಗಳ ಸ್ಥಾಪನೆಗೆ ನೆರವಾಗಬೇಕು. ಅದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು.

* ತೆವಳುತ್ತಾ ಸಾಗಿರುವ ಎತ್ತಿನಹೊಳೆ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಕಾಮಗಾರಿಗೆ ವೇಗ ನೀಡುವುದು.

* ಭದ್ರಾ ಮೇಲ್ದಂಡೆ ಯೋಜನೆ ಇನ್ನೂ ಆರಂಭಿಕ ಹಂತದಲ್ಲೇ ಇದ್ದು, ವಿಶೇಷ ಅನುದಾನ ಒದಗಿಸಿ ಕೆಲಸ ಆರಂಭಿಸಬೇಕು.

* ತುಮಕೂರು– ರಾಯದುರ್ಗ ರೈಲ್ವೆ ಯೋಜನೆಗೆ ಹಣ ಕೊಟ್ಟು ಕೆಲಸ ಪೂರ್ಣಗೊಳ್ಳುವಂತೆ ಮಾಡಬೇಕಿದೆ.

* ತುಮಕೂರು– ದಾವಣಗೆರೆ ರೈಲು ಮಾರ್ಗ ನಿರ್ಮಾಣಕ್ಕೆ ಅನುದಾನ ಒದಗಿಸಿ, ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು.

* ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹200 ಕೋಟಿ ಅನುದಾನ ಕೊಡಬೇಕು.

* ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ‘ಇಂಟಿಗ್ರೇಟೆಡ್ ಟೌನ್‌ಶಿಪ್’ ನಿರ್ಮಾಣ ಮಾಡಬೇಕು.

* ಜಿಲ್ಲೆಯಲ್ಲಿ ಶೇಂಗಾ ಸೇರಿದಂತೆ ಎಣ್ಣೆ ಕಾಳುಗಳ ಉತ್ಪಾದನೆ ಗಣನೀಯವಾಗಿ ಕುಸಿಯುತ್ತಿದೆ. ಪಾವಗಡ, ಶಿರಾ ಭಾಗದಲ್ಲಿ ಶೇಂಗಾ ಬೆಳೆಯುವುದನ್ನು ಪ್ರೋತ್ಸಾಹಿಸಲು ಕಾರ್ಯಕ್ರಮ ರೂಪಿಸಿ, ವಿಶೇಷ ಅನುದಾನ ಒದಗಿಸಬೇಕು.

* ರಾಜ್ಯದಲ್ಲೇ ಜಿಲ್ಲೆಯಲ್ಲಿ ಅತಿ ಹೆಚ್ಚು ಹುಣಸೆ ಹಣ್ಣು ಬೆಳೆಯುತ್ತಿದ್ದು, ಸರಿಯಾದ ಬೆಲೆ ಸಿಗದೆ ರೈತರು ನಲುಗಿದ್ದಾರೆ. ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಮೂಲಕ ಬೆಲೆ ಕುಸಿದ ಸಮಯದಲ್ಲಿ ಸಂಸ್ಕರಣೆ, ಮೌಲ್ಯವರ್ಧನೆ ಮಾಡುವುದು. ಶೀತಲ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ನೆರವಾಗುವುದು.

* ಹುಣಸೆ ಹಣ್ಣಿನಂತೆ ಹಲಸು ಹಣ್ಣನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಮೌಲ್ಯವರ್ಧನೆಯಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು.

* ಜಿಲ್ಲೆಗೆ ಪ್ರತ್ಯೇಕ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.