ADVERTISEMENT

ತುಮಕೂರು | ಜುಲೈ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಯುವುದೆ: ಶಾಸಕ ಬಿ.ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 6:46 IST
Last Updated 24 ಜುಲೈ 2024, 6:46 IST
<div class="paragraphs"><p>ಬಿ.ಸುರೇಶ್‌ಗೌಡ</p></div>

ಬಿ.ಸುರೇಶ್‌ಗೌಡ

   

ತುಮಕೂರು: ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಿ, ನೀರು ಹರಿಸಲು ಸಾಧ್ಯವೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಪ್ರಶ್ನಿಸಿದ್ದಾರೆ.

‘ಜುಲೈ ತಿಂಗಳ ಅಂತ್ಯಕ್ಕೆ ಎತ್ತಿನಹೊಳೆ ಯೋಜನೆಯಡಿ ಎಲ್ಲಾ ಏತ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಏಳು ಲಿವರ್‌ಗಳಿಂದ 42 ಕಿ.ಮೀ ವರೆಗೆ ನೀರು ಪೂರೈಕೆ ಮಾಡಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಸುರೇಶ್‌ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ADVERTISEMENT

ಈ ವಿಚಾರವನ್ನು ವಿಧಾನಸಭೆಯಲ್ಲಿ ಮಂಗಳವಾರ ಪ್ರಸ್ತಾಪಿಸಿದ ಶಾಸಕರು, ‘ಇನ್ನೂ ಕೆಲಸ ಮುಗಿದಿಲ್ಲ. ಜುಲೈ ಅಂತ್ಯದಲ್ಲಿ ಎಲ್ಲಿಂದ ನೀರು ಹರಿಸುತ್ತೀರಿ’ ಎಂದು ಪ್ರಶ್ನಿಸಿದರು. ಮುಂದಿನ ನವೆಂಬರ್‌ ಒಳಗೆ ಮಧುಗಿರಿ– ಪಾವಗಡ ಫೀಡರ್‌ ಒಳಗೊಂಡಂತೆ 42 ಕಿ.ಮೀ.ನಿಂದ 231 ಕಿ.ಮೀ ವರೆಗೆ ನೀರು ಪೂರೈಸುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ. ಆದರೆ ಇದು ವಾಸ್ತವದಲ್ಲಿ ಸಾಧ್ಯವೆ’ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಶಿವಕುಮಾರ್‌, ‘ಜುಲೈ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವೆ ಎಂದು ಅನುಮಾನ ವ್ಯಕ್ತಪಡಿಸಿರುವುದು ಸರಿಯಾಗಿದೆ. ಆದರೆ, ಸದನದಲ್ಲಿ ಸರ್ಕಾರ ಹೀಗೆ ವಚನ ಕೊಟ್ಟರೆ ಅಧಿಕಾರಿಗಳು, ಗುತ್ತಿಗೆದಾರರು ವೇಗದಿಂದ ಕೆಲಸ ಮಾಡುತ್ತಾರೆʼ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ‘ಸದನದಲ್ಲಿ ನಡೆಯುವ ಚರ್ಚೆಯನ್ನು ಜನರು ನೋಡುತ್ತಿರುತ್ತಾರೆ. ಈ ರೀತಿ ಸುಳ್ಳು ಹೇಳಬಾರದು’ ಎಂದು ಅಸಮಾಧಾನ ಹೊರ ಹಾಕಿದರು.

ಎತ್ತಿನಹೊಳೆ ಯೋಜನೆ 2011ರಲ್ಲಿ ಆರಂಭವಾಗಿದ್ದು, ಈವರೆಗೂ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಒಂದು ಹನಿ ನೀರು ಹರಿದು ಬಂದಿಲ್ಲ. ಯೋಜನೆಯ ವೆಚ್ಚ ₹12,000 ಕೋಟಿಯಿಂದ ₹25,000 ಕೋಟಿಗೆ ಏರಿಕೆಯಾಗಿದೆ. ಇನ್ನೂ ಭೂ ಸ್ವಾಧೀನವೇ ಪೂರ್ಣಗೊಂಡಿಲ್ಲ ಎಂದು ಹೇಳಿದರು.

ಕೆರೆಗಳಿಗೆ ನೀರು: ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳಧರ, ದುರ್ಗದಹಳ್ಳಿ, ತಿಮ್ಮನಾಯಕನಹಳ್ಳಿ, ಹಾಲುಗೊಂಡನಹಳ್ಳಿ, ಚನ್ನಮುದ್ದನಹಳ್ಳಿ, ಹಿರೇದೊಡ್ಡವಾಡಿ ಕೆರೆಗೆ ಎತ್ತಿನಹೊಳೆ ಯೋಜನೆಯಲ್ಲಿ ನೀರು ತುಂಬಿಸುವುದಾಗಿ ಶಿವಕುಮಾರ್ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.