ಪಾವಗಡ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಕ್ಕೆ ಏರಲು ಆಕಾಂಕ್ಷಿಗಳ ಕಸರತ್ತು ಪ್ರಾರಂಭವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದು, ಕಾಂಗ್ರೆಸ್-20, ಜೆಡಿಎಸ್ -2, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಇವರಲ್ಲಿ ಸದಸ್ಯ ಗೊರ್ತಿ ನಾಗರಾಜು, ಪಕ್ಷೇತರ ಸದಸ್ಯೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಹಿನ್ನಲೆ ಕಾಂಗ್ರೆಸ್ ಸಂಖ್ಯೆ 22ಕ್ಕೆ ಏರಿದೆ.
ಕಳೆದ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಇತ್ತು. ಮಾರ್ಚ್-15, 2019 ರಿಂದ 09-ನವೆಂಬರ್, 2020ರವರೆಗೆ ಆಡಳಿತಾಧಿಕಾರಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಡಿಸೆಂಬರ್-19, 2022ರವರೆಗೆ ರಾಮಾಂಜಿನಪ್ಪ, ಗಂಗಮ್ಮ, ಡಿ ವೇಲುರಾಜು, ಪಿ. ಧನಲಕ್ಷ್ಮಿ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
ಅಧ್ಯಕ್ಷರಾಗಿ ಆಯ್ಕೆಯಾದವರು ಆಡಳಿತ ಬಗ್ಗೆ ತಿಳಿದುಕೊಳ್ಳುವ ವೇಳೆಗೆ ರಾಜಿನಾಮೆ ನೀಡುವ ಸಮಯ ಬರುತ್ತಿತ್ತು. ಹೀಗಾಗಿ ಅಭಿವೃದ್ಧಿ ಕೆಲಸ ಮಾಡಲೂ ಸಾಧ್ಯವಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.
ಉಪಾಧ್ಯಕ್ಷರಾಗಿ ಸುಧಾಲಕ್ಷ್ಮಿ, ಜಾಹ್ನವಿ, ಶಶಿಕಲಾ ಅಧಿಕಾರ ನಿರ್ವಹಿಸಿದ್ದರು.
ಈ ಬಾರಿಯೂ ಕಾಂಗ್ರೆಸ್ ಸದಸ್ಯರೂ ಅಧ್ಯಕ್ಷ, ಉಪಾಧ್ಯಕ್ಷೆಯಾಗಲಿರುವುದು ಖಚಿತ. ಆದರೆ ಯಾರು ಅಧ್ಯಕ್ಷರಾಗಬೇಕು, ಉಪಾಧ್ಯಕ್ಷೆಯಾಗಬೇಕು ಎಂಬ ಚರ್ಚೆ ಶುರುವಾಗಿದೆ.
ಸದಸ್ಯರ ಮಾಹಿತಿ ಪ್ರಕಾರ ಶಾಸಕ ಎಚ್.ವಿ. ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪ ತೀರ್ಮಾನ ಅಂತಿಮ. ಈ ಬಾರಿಯೂ ಅಧಿಕಾರ ಹಂಚಿಕೆಯಾಗಲಿದೆ. ಸದ್ಯ ಜಿ. ಸುದೇಶ್ ಕುಮಾರ್, ಪಿ.ಎಚ್. ರಾಜೇಶ್ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇವರೊಟ್ಟಿಗೆ ನಾಗಭೂಷಣರೆಡ್ಡಿ, ಪಿ. ಬಾಲಸುಬ್ರಹ್ಮಣ್ಯಂ, ರವಿ ಹೆಸರು ಕೇಳಿಬರುತ್ತಿವೆ.
ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಅಧಿಕಾರದ ಚುಕ್ಕಾಣಿ ಹಿಡಿದವರನ್ನು ಹೊರತುಪಡಿಸಿ ಉಳಿದ ಮಹಿಳಾ ಸದಸ್ಯರಲ್ಲಿ ಅಧಿಕಾರ ಹಂಚಿಕೆಯಾಗಲಿದೆ ಎಂಬ ಮಾತು ಹರಿದಾಡುತ್ತಿವೆ. ಅವರಲ್ಲಿ ವಿ. ಗೀತಾ, ಮಾಲಿನ್ತಾಜ್ ಪ್ರಮುಖರು.
‘ಅಧಿಕಾರ ತಮಗೇ ನೀಡಬೇಕು, ಮೊದಲ ಅವಧಿಯಲ್ಲಿಯೇ ತಮಗೆ ಅವಕಾಶ ನೀಡಬೇಕು’ ಎಂಬಿತ್ಯಾದಿಯಾಗಿ ಶಾಸಕ, ಮಾಜಿ ಸಚಿವರ ಬಳಿ ಸದಸ್ಯರು ಎಡತಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.