ADVERTISEMENT

ಸಹಾಯಧನ ಗ್ಯಾರಂಟಿಗೆ ಕಾರ್ಮಿಕರು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 6:10 IST
Last Updated 29 ಜೂನ್ 2024, 6:10 IST
<div class="paragraphs"><p>ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.</p></div>

ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.

   

ತುಮಕೂರು: ಸಹಾಯಧನ, ಪಿಂಚಣಿ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಯಿತು.

‘ಗ್ಯಾರಂಟಿ ಯೋಜನೆಗಳ ಮರೆಯಲ್ಲಿ ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಮುಖ್ಯಮಂತ್ರಿ ಎಚ್ಚರ ವಹಿಸಬೇಕು. ಶೈಕ್ಷಣಿಕ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಅರ್ಜಿಗಳು ಕಳೆದ ಒಂದು ವರ್ಷದಿಂದ ಇಲಾಖೆಯ ಕಚೇರಿಯಲ್ಲಿ ಕೊಳೆಯುತ್ತಿವೆ’ ಎಂದು ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪಿಂಚಣಿದಾರರ ಪಿಂಚಣಿ ನಿಂತಿದ್ದು, ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊನೆಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಗಾಗಿ ಹೈಕೋರ್ಟ್ ಮೊರೆ ಹೋಗಬೇಕಾಯಿತು. ಮಂಡಳಿಯು ಮಾಡಿರುವ ದುಂದುವೆಚ್ಚಕ್ಕೆ ಲೆಕ್ಕಪತ್ರ ಮಂಡಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಈ ಎಲ್ಲ ವಿಚಾರಗಳ ಕುರಿತು ಸರ್ಕಾರವನ್ನು ಎಚ್ಚರಿಸಲು ಜುಲೈ 3ರ ವರೆಗೆ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯಲಿವೆ ಎಂದರು.

ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್, ‘ಇಲಾಖೆಯ ಅಧಿಕಾರಿಗಳು ಕಾರ್ಮಿಕ ಸಂಘಟನೆಗಳು ಸಲ್ಲಿಸುವ ನೋಂದಣೆ, ನವೀಕರಣ, ಸೌಲಭ್ಯಗಳ ಅರ್ಜಿಗಳನ್ನು ಒಂದಲ್ಲೊಂದು ಕಾರಣ ನೀಡಿ ವಜಾ ಮಾಡುತ್ತಿದ್ದಾರೆ. ಕೆಲವು ಕಡೆ ಕಾರ್ಮಿಕ ನಿರೀಕ್ಷಕರು ತಮ್ಮ ಭ್ರಷ್ಟಾಚಾರಕ್ಕೆ ಅನುಕೂಲವಾಗುವ ಕೆಲ ಸ್ಥಳೀಯ ಮುಖಂಡರನ್ನು ಗುರುತಿಸಿ, ಹೊಸ ಸಂಘಗಳನ್ನು ನೋಂದಣಿ ಮಾಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಎಐಟಿಯುಸಿ ಮುಖಂಡ ಗೋವಿಂದರಾಜು, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಟಿ.ಎಂ.ಗೋವಿಂದರಾಜು, ಇಬ್ರಾಹಿಂ ಖಲೀಲ್, ಶಂಕರಪ್ಪ, ಎಂ.ಟಿ.ವೆಂಕಟೇಶ್‌, ಕಂಬೇಗೌಡ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.