ADVERTISEMENT

ಶಿರಾಕ್ಕೆ ಹೇಮಾವತಿ ಜತೆಗೆ ಎತ್ತಿನಹೊಳೆ ನೀರು: ಶಾಸಕ ಟಿ.ಬಿ.ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 14:25 IST
Last Updated 30 ಸೆಪ್ಟೆಂಬರ್ 2024, 14:25 IST
ಟಿ.ಬಿ.ಜಯಚಂದ್ರ, ಶಾಸಕರು.
ಟಿ.ಬಿ.ಜಯಚಂದ್ರ, ಶಾಸಕರು.   

ಶಿರಾ: ನಗರದ ಜನರಿಗೆ ಹೇಮಾವತಿ ಕುಡಿಯುವ ನೀರಿನ ಜತೆಗೆ ಎತ್ತಿನಹೊಳೆ ಯೋಜನೆ ಮೂಲಕ ಕುಡಿಯುವ ನೀರು ಹರಿಸುವುದಾಗಿ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು. ಎತ್ತಿನಹೊಳೆ ಯೋಜನೆಯಿಂದ ಶಿರಾ ತಾಲ್ಲೂಕಿಗೆ 0.514 ಟಿಎಂಸಿ ನೀರು ಹಂಚಿಕೆಯಾಗಿದೆ. ಇದನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬಹುದಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ನೀರಿನ ಅನುಪಾತದಂತೆ ಎತ್ತಿನಹೊಳೆ ಯೋಜನೆಯಿಂದ ಹಂಚಿಕೆಯಾಗಿರುವ ನೀರನ್ನು ನಗರ ಪ್ರದೇಶಕ್ಕೆ 0.118 ಟಿಎಂಸಿ ಮತ್ತು ಗ್ರಾಮೀಣ ಪ್ರದೇಶಕ್ಕೆ 0.396 ಟಿಎಂಸಿ ನೀರು ಒದಗಿಸಲು ಬೆಂಗಳೂರಿನಲ್ಲಿ ನಡೆದ ಶಿರಾ ತಾಲ್ಲೂಕಿನ ಎತ್ತಿನಹೊಳೆ ಕುಡಿಯುವ ಯೋಜನೆಗೆ ಸಂಬಂಧಿಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

2003-04ರಿಂದ ಹೇಮಾವತಿ ಯೋಜನೆಯಿಂದ ಶಿರಾ ತಾಲ್ಲೂಕಿಗೆ ಹಂಚಿಕೆಯಾಗಿರುವ ನೀರಿನಲ್ಲಿ ಶಿರಾ ದೊಡ್ಡ ಕೆರೆಯಲ್ಲಿ 120 ಎಂಸಿಎಫ್‌ಟಿ ನೀರು ಶೇಖರಣೆ ಮಾಡಿ ಇಲ್ಲಿಂದಲೇ ಶುದ್ಧೀಕರಿಸಿ ಶಿರಾ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ನಗರದ ಜನಸಂಖ್ಯೆ 1 ಲಕ್ಷ ಇದೆ. ಮುಂದಿನ 20ವರ್ಷದಲ್ಲಿ 2ಲಕ್ಷವಾಗುವ ಸಾಧ್ಯತೆ ಇದೆ. ಮುಂದಿನ 20 ವರ್ಷಗಳಿಗೆ ಮುಂಜಾಗ್ರತ ಕ್ರಮವಾಗಿ 0.380 ಟಿಎಂಸಿ ನೀರಿನ ಯೋಜನೆ ರೂಪಿಸಬೇಕಿದೆ. ಇಷ್ಟು ನೀರು ದೊಡ್ಡ ಕೆರೆಯಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ ಎಂದರು.

ADVERTISEMENT

ಶಿರಾ ಪಕ್ಕದಲ್ಲಿಯೇ ಇರುವ ಚಿಕ್ಕಸಂದ್ರ ಕೆರೆಯನ್ನು ಶೇಖರಣಾ ಜಲ ಕೇಂದ್ರವಾಗಿ ಮಾಡುವಂತೆ ಮತ್ತು ಗ್ರಾಮೀಣ ಪ್ರದೇಶಕ್ಕೆ ಕಳ್ಳಂಬೆಳ್ಳ ಹೋಬಳಿ ಸಿ.ಬಿ ದೇವಸ್ಥಾನದಿಂದ ಹಾಲ್ ದೊಡ್ಡೇರಿ, ತರೂರು, ಮದಲೂರು, ಬರಗೂರು, ದೊಡ್ಡಬಾಣಗೆರೆ ಹಾಗೂ ತಾಲ್ಲೂಕು ಇತರ ಭಾಗಗಳನ್ನು ಪರಿಗಣಿಸಿ ಹಾಲಿ ಅನುಷ್ಠಾನಗೊಳ್ಳುತ್ತಿರುವ ಜೆಜೆಎಂ ಯೋಜನೆ ಮತ್ತು ಯಾವ ಭಾಗದಲ್ಲಿ ಅತ್ಯಂತ ಕ್ಲಿಷ್ಟಕರವಾದ ನೀರಿನ ಸಮಸ್ಯೆ ಇರುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಯೋಜನೆ ರೂಪು-ರೇಷೆ  ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಲ್ಲೂಕಿನಲ್ಲಿ 2016-17 ಅವಧಿಯಲ್ಲಿ ಹೇಮಾವತಿ ನೀರಿನ ಲಭ್ಯತೆ ಆಧಾರದಲ್ಲಿ ಕಳ್ಳಂಬೆಳ್ಳ ವ್ಯಾಪ್ತಿಯ 23 ಗ್ರಾಮಗಳಿಗೆ, ಯಲಿಯೂರು ವ್ಯಾಪ್ತಿಯ 22 ಗ್ರಾಮ ಮತ್ತು ತಾವರೆಕೆರೆ ವ್ಯಾಪ್ತಿಯ 65 ಗ್ರಾಮಗಳು ಸೇರಿ ಒಟ್ಟು 110 ಗ್ರಾಮಗಳಲ್ಲಿ ₹35ಕೋಟಿ ವೆಚ್ಚದಲ್ಲಿ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಕಾಮಗಾರಿ ಮುಕ್ತಾಯವಾದರೂ ಇದುವರೆಗೂ ಜನರಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ತಕ್ಷಣ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.