ತುಮಕೂರು: ನಗರದ ಮರಳೂರು ದಿಣ್ಣೆಯಲ್ಲಿ ಶುಕ್ರವಾರ ತಡರಾತ್ರಿ ಚಾಕುವಿನಿಂದ ಚುಚ್ಚಿ ಯುವಕನನ್ನು ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ 6 ಮಂದಿ ಆರೋಪಿಗಳನ್ನು ಪೋಲಿಸರು ಶನಿವಾರ ಬಂಧಿಸಿದ್ದಾರೆ.
ರಿಹಾನ್ ಪಾಷ (20) ಕೊಲೆಯಾದ ಯುವಕ. ಮರಳೂರು ದಿಣ್ಣೆಯ ಸಾದಿಕ್ ಪಾಷ, ಮುಜಾಹಿದ್ ಪಾಷ, ಅಬ್ಬಾಸ್, ದಸ್ತಗೀರ್, ಇಮ್ರಾನ್ ಮತ್ತು ಯೂಸಫ್ ಬಂಧಿತರು. ಯುವತಿ ವಿಚಾರಕ್ಕಾಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಹಾನ್‌ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸುತ್ತಿದ್ದರು. ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ರಿಹಾನ್ ಪಾಷ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ರಿಹಾನ್ ಸಹೋದರ ಆಯಾನ್ ಪಾಷ ನೀಡಿದ ದೂರಿನ ಮೇರೆಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಶುಕ್ರವಾರ ರಾತ್ರಿ 10.30 ಗಂಟೆ ಸಮಯದಲ್ಲಿ ಆರೋಪಿಗಳು ಕರೆ ಮಾಡಿ ರಿಹಾನ್ ಪಾಷರನ್ನು ಮನೆಯಿಂದ ಹೊರಗಡೆ ಕರೆಸಿಕೊಂಡಿದ್ದರು. ಮನೆಯಿಂದ ಹೊರ ಬರುತ್ತಿದ್ದಂತೆ ಅವರ ಮೇಲೆ ಎಲ್ಲರು ಹಲ್ಲೆ ನಡೆಸಿದರು. ಸಾದಿಕ್ ಚಾಕುವಿನಿಂದ ಹೊಟ್ಟೆಗೆ ಇರಿದರು. ನಂತರ ಎಲ್ಲರು ಅಲ್ಲಿಂದ ಓಡಿ ಹೋದರು’ ಎಂದು ಆಯಾನ್ ಪಾಷ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಮುಜಾಹಿದ್ ಅವರ ಸಂಬಂಧಿ ಯುವತಿಯನ್ನು ರಿಹಾನ್ ಪ್ರೀತಿಸುತ್ತಿದ್ದರು. ಇದೇ ವಿಚಾರವಾಗಿ ಈ ಹಿಂದೆ ಇಬ್ಬರ ಮಧ್ಯೆ ಗಲಾಟೆಯಾಗಿತ್ತು. ಇಬ್ಬರು ಮಾತು ಬಿಟ್ಟಿದ್ದರು. ಯುವತಿಯ ವಿಚಾರವಾಗಿಯೇ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.