ತುಮಕೂರು: ಕಾನೂನು ನಮ್ಮ ದೇಶವನ್ನು ಆಳುತ್ತಿದೆ. ಇಂತಹ ಕಾನೂನನ್ನು ಪಾಲನೆ ಮಾಡುವುದರಲ್ಲಿ ನಾವು ಹಿಂಜರಿಯತ್ತಿದ್ದೇವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಹಾಗೂ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮಾನವ ಹಕ್ಕುಗಳ ಅರಿವು, ರಕ್ಷಣೆ, ನೆರವು, ಸಂರಕ್ಷಣೆ ಮತ್ತು ಕಾನೂನು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲಾ ಕಾನೂನಿನ ಚೌಕಟ್ಟಿನಡಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಆದರೆ, ಸಂವಿಧಾನ ಅರ್ಥೈಸಿಕೊಳ್ಳುವುದರಲ್ಲಿ, ಕಾನೂನು ಪಾಲನೆ ಮಾಡುವುದರಲ್ಲಿ ಸೋಲುತ್ತಿದ್ದೇವೆ. ಯುವ ಸಮೂಹಕ್ಕೆ ಕಾನೂನಿನ ಅರಿವಿನ ಕೊರತೆ ಹೆಚ್ಚಾಗಿದೆ. ಸಕಾರಾತ್ಮಕ ಚಿಂತನೆ ಬಿಟ್ಟು, ನಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ತಮ್ಮ ಒಳಿತಿಗಾಗಿ ಬೇರೆಯವರ ಹಕ್ಕುಗಳನ್ನು ಚ್ಯುತಿಗೊಳಿಸುವ ಕಾರ್ಯ ಎಲ್ಲರಿಂದ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಕಾನೂನಿನ ಅರಿವು ಹೊಂದುವುದು ಮತ್ತು ಬೇರೆಯವರ ಹಕ್ಕುಗಳನ್ನು ಗೌರವಿಸುವ ಕೆಲಸ ಮಾಡಬೇಕಿದೆ ಎಂದರು.
ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇವೆ ಸಲ್ಲಿಸುತ್ತಿದೆ. ಅನ್ಯಾಯದ ವಿರುದ್ಧ ಎಲ್ಲರೂ ತಮ್ಮ ದೂರುಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಈ ಮೂಲಕ ನಾವು ಬದುಕಬೇಕು, ಬೇರೆಯವರಿಗೂ ಬದುಕುವ ವಾತಾವರಣವನ್ನು ನಾವೆಲ್ಲರೂ ನಿರ್ಮಿಸಬೇಕು ಎಂದರು.
ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಮಾತನಾಡಿ, ‘ಜಗತ್ತು ಎರಡು ಮಹಾಯುದ್ಧಗಳನ್ನು ಕಂಡಿದೆ. ಈ ಎರಡೂ ಮಹಾಯುದ್ಧಗಳೂ ಪ್ರಕೃತಿ ಮೇಲೆ ಘೋರ ಪರಿಣಾಮ ಬೀರಿದೆ. ಇದನ್ನು ಮನಗಂಡ ವಿಶ್ವಸಂಸ್ಥೆಯೂ ವಿಶ್ವ ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಅನಿವಾರ್ಯತೆ ಎಂದರಿತು ಆಯೋಗ ಸ್ಥಾಪಿಸಿದೆ. ಇದು ಇಂದಿಗೂ ಪ್ರಸ್ತುತವಾಗಿದೆ’ ಎಂದರು.
ಮಾನವ ಹಕ್ಕುಗಳು ಎಲ್ಲದಕ್ಕಿಂತ ದೊಡ್ಡದು. ಕಾನೂನಿನ ಚೌಕಟ್ಟಿನಲ್ಲಿ ಬರುವ ಈ ಹಕ್ಕುಗಳ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಬೇಕಿದೆ.. ವಿದ್ಯಾರ್ಥಿಗಳು ತಾವು ಮಾನವ ಹಕ್ಕು, ಕಾನೂನುಗಳ ಬಗ್ಗೆ ಅರಿವು ಹೊಂದುವ ಮೂಲಕ ಇತರರಿಗೂ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ನಾವೆಲ್ಲರೂ ಕರ್ತವ್ಯಕ್ಕೆ ಹೆಚ್ಚು ಮನ್ನಣೆ ನೀಡಬೇಕು. ಹಕ್ಕುಗಳ ಬಗ್ಗೆ ಒಲವಿರಬೇಕು. ಆಗಾದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ’ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಕೆ.ಎನ್.ಗಂಗಾ ನಾಯ್ಕ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜಿ.ಉದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.