ADVERTISEMENT

ಮೂಲೆಗೆ ಸರಿದ ಕಾಂಗ್ರೆಸ್ ಯುವ ಘಟಕ

ಕಾಂಗ್ರೆಸ್‌ ಮುಖಂಡ ಕೆಂಚಮಾರಯ್ಯ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಮೇ 2024, 5:37 IST
Last Updated 22 ಮೇ 2024, 5:37 IST
ತುಮಕೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಮುಖಂಡರಾದ ಆರ್.ರಾಮಕೃಷ್ಣಪ್ಪ, ಗಂಗಹನುಮಯ್ಯ, ಕೆಂಚಮಾರಯ್ಯ, ರಫಿಕ್‌ ಅಹ್ಮದ್‌, ರೇವಣಸಿದ್ದಯ್ಯ, ಕುಮಾರಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು
ತುಮಕೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಮುಖಂಡರಾದ ಆರ್.ರಾಮಕೃಷ್ಣಪ್ಪ, ಗಂಗಹನುಮಯ್ಯ, ಕೆಂಚಮಾರಯ್ಯ, ರಫಿಕ್‌ ಅಹ್ಮದ್‌, ರೇವಣಸಿದ್ದಯ್ಯ, ಕುಮಾರಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು   

ತುಮಕೂರು: ‘ಕಾಂಗ್ರೆಸ್‌ನ ಇಂದಿನ ಹೀನಾಯ ಸ್ಥಿತಿಗೆ ಪಕ್ಷದವರೇ ಕಾರಣ. ಯುವ ಘಟಕಗಳಿಗೆ ಒತ್ತು ನೀಡದ ಪರಿಣಾಮ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ಘಟಕ ನಾಮಕಾವಸ್ಥೆಗೆ ಅಸ್ತಿತ್ವದಲ್ಲಿವೆ’ ಎಂದು ಕಾಂಗ್ರೆಸ್‌ ಮುಖಂಡ ಕೆಂಚಮಾರಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಯುವ ಜನತೆಯೇ ದೇಶದ ಭವಿಷ್ಯ ಎಂದು ನಂಬಿದ್ದರು. ಮತದಾನದ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿದರು. ಯುವಕರಿಗೆ ಹೆಚ್ಚಿನ ಅವಕಾಶ ದೊರೆತರೆ ಮಾತ್ರ ಪಕ್ಷವನ್ನು ತಳಮಟ್ಟದಲ್ಲಿ ಬಲವಾಗಿ ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ADVERTISEMENT

ಕಾಂಗ್ರೆಸ್‌ ತತ್ವ ಸಿದ್ಧಾಂತಗಳ ಬಗ್ಗೆ ಯುವ ಜನತೆಗೆ ಸರಿಯಾದ ತಿಳಿವಳಿಕೆ ಇಲ್ಲದೆ, ಮೋದಿ, ಮೋದಿ ಅಂತ ಹೋಗಿ ದುಡಿಯಲು ಉದ್ಯೋಗವೂ ಇಲ್ಲದೆ, ಅಬ್ಬೇಪಾರಿಗಳಂತೆ ಅಲೆಯುವಂತಹ ಸ್ಥಿತಿ ತಂದು ಕೊಂಡಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ‘ರಾಜೀವ್‌ಗಾಂಧಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಐಟಿ–ಬಿಟಿಗೆ ಉತ್ತೇಜನ ನೀಡಿದ್ದರು. ದೇಶದಲ್ಲಿ ಶಾಂತಿ–ಸುವ್ಯವಸ್ಥೆ ಹದಗೆಟ್ಟಿದ್ದು, ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಆರೋಪಿಗಳು ಕಣ್ಮುಂದೆ ಇದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

ಮಾಜಿ ಶಾಸಕರಾದ ಗಂಗಹನುಮಯ್ಯ, ರಫಿಕ್‌ ಅಹ್ಮದ್‌, ಮುಖಂಡರಾದ ಆರ್.ರಾಮಕೃಷ್ಣಪ್ಪ, ರೇವಣಸಿದ್ದಯ್ಯ, ಕುಮಾರಸ್ವಾಮಿ, ಫಯಾಜ್, ಮಹೇಶ್, ನ್ಯಾತೇಗೌಡ, ಮಾರುತಿ ಗಂಗಹನುಮಯ್ಯ, ಸುಲ್ತಾನ್‌ ಮಹ್ಮದ್‌, ಎಚ್.ಸಿ.ಹನುಮಂತಯ್ಯ, ನಯಾಜ್‌ ಅಹ್ಮದ್‌, ಮರಿಚನ್ನಮ್ಮ, ಭಾಗ್ಯಮ್ಮ, ಮುಬೀನ, ಕೆಂಪರಾಜು, ಷಣ್ಮುಖಪ್ಪ, ಹರ್ಷರಾಮು, ಸುಜಾತಾ, ಜಯಮೂರ್ತಿ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.