ಉಡುಪಿ: ‘ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಭವಿಷ್ಯವಾಗಿದೆ. ವಿದ್ಯಾರ್ಥಿಗಳು ತಮ್ಮಿಷ್ಟದ ವಿಷಯದಲ್ಲಿ ಸಮರ್ಪಣಾ ಭಾವದಿಂದ ಸಂಶೋಧನಾ ಕೆಲಸ ಮಾಡಬೇಕು’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ (ಕೆಎಸ್‌ಟಿಎ) ಅಧ್ಯಕ್ಷ ಪ್ರೊ. ಯು.ಆರ್. ರಾವ್ ಸಲಹೆ ನೀಡಿದರು.
ಕೆಎಸ್‌ಟಿಎ ಮತ್ತು ಪೂರ್ಣಪ್ರಜ್ಞ ಕಾಲೇಜು ಪೂರ್ಣಪ್ರಜ್ಞ ಮಿನಿ ಆಡಿಟೋರಿಯಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಪರಿಸರ ವ್ಯವಸ್ಥೆ: ಉದ್ಭವಿಸುತ್ತಿರುವ ಸವಾಲುಗಳು’ ವಿಷಯ ಕುರಿತ ಪ್ರಾಂತೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಆಳವಾದ ಅಧ್ಯಯನವನ್ನು ವಿಜ್ಞಾನ ಬಯಸುತ್ತದೆ. ವಿಜ್ಞಾನದಲ್ಲಿ ಸಾಧನೆ ಮಾಡಬೇಕು ಎಂದರೆ ಜೀವನ ಪೂರ್ತಿ ಕಲಿಕೆಯಲ್ಲಿ ತೊಡಗಬೇಕು’ ಎಂದರು. 2050ರ ವೇಳೆಗೆ ಆಹಾರ ಉತ್ಪನ್ನಗಳ ಬೇಡಿಕೆ 320 ಮಿಲಿಯನ್ ಟನ್ ಆಗಲಿದೆ. ಅದನ್ನು ಸಾಧಿಸಲು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಪ್ರಸ್ತುತ ಕೃಷಿ ಇಲಾಖೆ ಅನುಸರಿಸುತ್ತಿರುವ ಮಾರ್ಗ ವೈಜ್ಞಾನಿಕವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿ, ಸ್ವಾರ್ಥ, ಬೇಜವಾಬ್ದಾರಿ, ದುರಾಸೆ ಪರಿಸರ ನಾಶಕ್ಕೆ ಕಾರಣವಾಗುತ್ತಿದೆ. ಮನುಷ್ಯ ತನ್ನ ಪ್ರಯೋಜನಕ್ಕಾಗಿ ಪರರ ಸ್ವತ್ತನ್ನು ಬಳಸುತ್ತಿದ್ದಾನೆ. ಪರಿಸರ ರಕ್ಷಣೆಯ ಬಗ್ಗೆ ಎಲ್ಲರೂ ಗಂಭೀರ ಚಿಂತನೆ ಮಾಡಬೇಕು ಎಂದರು.
ಶಾಸಕ ಪ್ರಮೋದ್ ಮಧ್ವರಾಜ್, ಮಣಿಪಾಲ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಂ.ಎಸ್. ವಲಿಯಾಥನ್, ಕೆಎಸ್‌ಟಿಎ ವೈಜ್ಞಾನಿಕ ಅಧಿಕಾರಿ ಡಾ. ಎ.ಎಂ. ರಮೇಶ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಪಿ. ಭಟ್, ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಸದಾಶಿವರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.