ಉಡುಪಿ: ಉಡುಪಿ ನಗರದಲ್ಲಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಾದ ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಹಾಗೂ ಉಡುಪಿ ನಗರಸಭೆಯ ವತಿಯಿಂದ ಬೈಲೂರು ವಾರ್ಡ್‌ನ ಭಾಗ್ಯಮಂದಿರ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಶಾಖಾ ಗ್ರಂಥಾಲಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಗ್ರಂಥಾಲಯದ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಉಡುಪಿ ಅಭಿವೃದ್ಧಿ ಪ್ರಾಧಿಕಾರದಿಂದ ₹ 1ಕೋಟಿ ಹಾಗೂ ಗ್ರಂಥಾಲಯ ಇಲಾಖೆಯಿಂದ ₹ 1ಕೋಟಿ ನೀಡಲಾಗುವುದು. ಇನ್ನೂ ₹ 3 ಕೋಟಿ ಅನುದಾನವನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಇಂದಿನ ಕಾಲಘಟ್ಟದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಜನರಿಗೆ ಪುಸ್ತಕಗಳ ಬಗ್ಗೆ ಇದ್ದ ಅಭಿರುಚಿಯೂ ದಿನಕಳೆದಂತೆ ಕಡಿಮೆಯಾಗುತ್ತಿದೆ. ಆಧುನಿಕ ತಂತ್ರ ಜ್ಞಾನಗಳ ಕಡೆಗೆ ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಪ್ರತಿ ನಗರ ಸಭಾ ಸದಸ್ಯರು ತಮ್ಮ ತಮ್ಮ ವಾರ್ಡ್ ಗಳಲ್ಲಿ ಒಂದು ಗ್ರಂಥಾಲಯವನ್ನು ನಿರ್ಮಿಸಲು ಮುತುವರ್ಜಿವಹಿಸಬೇಕು. ಆ ಮೂಲಕ ಜನರನ್ನು ಗ್ರಂಥಾಲಯದ ಕಡೆಗೆ ಆಕರ್ಷಿಸಬೇಕು ಎಂದರು.
ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪಿ. ಯುವರಾಜ ಅಧ್ಯಕ್ಷತೆಯನ್ನು ವಹಿಸಿದ್ದರು. ಪೌರಾಯುಕ್ತ ಡಿ. ಮಂಜು ನಾಥಯ್ಯ, ನಗರಸಭೆಯ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ಎಂ.ಆರ್. ಪೈ, ರಮೇಶ್ ಕಾಂಚನ್, ಮಿನಾಕ್ಷಿ ಮಾಧವ ಬನ್ನಂಜೆ, ಹೇಮಾ ಹಿಲಾರಿ ಜತ್ತನ್ನ, ಜನಾರ್ದನ ಭಂಡಾರ್ಕರ್, ಶಾಂತ ರಾಮ್, ಉದ್ಯಮಿ ಅಮೃತ್ ಶೆಣೈ ಇದ್ದರು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ನಗರ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಐ. ನಳಿನಿ ಸ್ವಾಗತಿಸಿದರು, ಗ್ರಂಥಪಾಲಕಿ ಎಂ. ಜಯಶ್ರೀ ವಂದಿಸಿದರು. ಎಂ. ಪ್ರೇಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.