ಉಡುಪಿ: ಮಂಗಳೂರು ವಿವಿ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯ ಉಡುಪಿ ವಲಯದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿದೆ. ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದ್ವಿತೀಯ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜು ತೃತೀಯ ಸ್ಥಾನ ಪಡೆದಿವೆ.
ಪೂರ್ಣಪ್ರಜ್ಞ ಕಾಲೇಜಿನ ಸುಹಾನ್ ರಾಜ್ ಉತ್ತಮ ಆಟಗಾರ, ಆಳ್ವಾಸ್ ಕಾಲೇಜಿನ ಕೆ. ವಿಶ್ವರಾಜ್ ಉತ್ತಮ ರೈಡರ್ ಹಾಗೂ ತೆಂಕನಿಡಿಯೂರು ಕಾಲೇಜಿನ ಭಾಗ್ಯರಾಜ್ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರು.
ಬಹುಮಾನ ವಿತರಿಸಿ ಮಾತನಾಡಿದ ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ, ಕ್ರೀಡೆಯಿಂದ ಬೌದ್ಧಿಕ ಮಟ್ಟ ಬೆಳವಣಿಗೆಯಾಗುವುದರ ಜತೆಗೆ ಮನಶಾಂತಿ ಲಭಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕ್ರೀಡಾ ಚಟುವಟಿಕೆಯಲ್ಲೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಉನ್ನತ ಸಾಧನೆ ಮಾಡಬೇಕು. ಕ್ರಿಕೆಟ್ ಆಟದ ಮೇಲಿರುವ ಪ್ರೀತಿಯನ್ನು ಕಡಿಮೆ ಮಾಡಿ, ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿ ಗೌರವ ಕೋಶಧಿಕಾರಿ ಪ್ರದೀಪ್ ಕುಮಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಂಗಳೂರು ವಿ.ವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಸಿ.ಕೆ. ಕಿಶೋರ ಕುಮಾರ್, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಬಾಲಕೃಷ್ಣ ಹೆಗ್ಡೆ, ಪಿಪಿಸಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ವೆಂಕಟರಮಣ ಸೋಮ ಯಾಜಿ ಉಪಸ್ಥಿತರಿದ್ದರು.
ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಟಿ.ಎಸ್. ರಮೇಶ್ ಸ್ವಾಗತಿಸಿದರು, ಕನ್ನಡ ಉಪನ್ಯಾಸಕ ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು, ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಕಲ್ಪನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.