ADVERTISEMENT

ಜನರಲ್ಲಿ ಅಧಿಕವಾದ ಪ್ರಚಾರ ಪ್ರೀತಿ

ವಿದ್ವತ್ ಸನ್ಮಾನ ಸ್ವೀಕರಿಸಿ ವಿದ್ವಾಂಸ ಬನ್ನಂಜೆ ಗೋವಿಂದ ಆಚಾರ್ಯ ವಿಷಾದ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 9:12 IST
Last Updated 1 ಡಿಸೆಂಬರ್ 2015, 9:12 IST

ಕಾರ್ಕಳ: ಇಂದು ಶಿಕ್ಷಣಾಸಕ್ತಿಯೂ ಇಲ್ಲ, ಯಾವ ಭಾಷೆಯ ಬಗ್ಗೆಯೂ ಎಚ್ಚರವಿಲ್ಲ. ಕೇವಲ ಪ್ರಚಾರ ಪ್ರೀತಿಯೇ ಅಧಿಕ ವಾಗಿದೆ ಎಂದು ವಿದ್ವಾಂಸ ಡಾ.ಬನ್ನಂಜೆ ಗೋವಿಂದ ಆಚಾರ್ಯ ವಿಷಾದ ವ್ಯಕ್ತ ಪಡಿಸಿದರು.

ನಗರದ ಸಾಹಿತ್ಯ ಸಂಘದ ಆಶ್ರಯ ದಲ್ಲಿ ಅನಂತಶಯನದ ಹೋಟೆಲ್ ಪ್ರಕಾಶ್‌ದ ಸಂಭ್ರಮ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ ವಿದ್ವತ್ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇಂದಿನ ಸಾಹಿತ್ಯಕ ಹಾಗೂ ಶಿಕ್ಷಣ ಕ್ಷೇತ್ರವನ್ನು ಗಮನಿಸಿದರೆ ವ್ಯಥೆಯಾಗು ತ್ತದೆ. ಹಿಂದೆ ಕನ್ನಡದಲ್ಲಿ ರಚನೆಯಾಗು ತ್ತಿದ್ದ ಕಾವ್ಯಗಳಲ್ಲಿ ಸಂಸ್ಕೃತ ಪದಗಳೇ ಅಧಿಕವಾಗಿರುತ್ತಿದ್ದರೂ, ಕನ್ನಡ ಶ್ರೀಮಂತವಾಯಿತು. ಆದರೆ, ಇಂದು ಅರೆ ಕನ್ನಡ, ಅರೆ ಆಂಗ್ಲ ಭಾಷೆಯ ಉಪಯೋಗದಿಂದ ಕನ್ನಡದ ಶಬ್ದಗಳು ಕಣ್ಮರೆಯಾಗುತ್ತಿವೆ. ಇಂದು ಜನ ಮೆಚ್ಚಲು ಶಿಕ್ಷಣ ಎನ್ನುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಅಖಂಡ ಭಾರತ ವ್ಯಾಪ್ತಿಯಲ್ಲಿ ಸಂಸ್ಕೃತ ಸಂಪರ್ಕ ಭಾಷೆ ಯಾಗಿತ್ತು. ಶಂಕರರು, ರಾಮಾನುಜಾ ಚಾರ್ಯರು, ಮಧ್ವಾಚಾರ್ಯರು ಕೂಡ ಸಂಸ್ಕೃತದ ಮೂಲಕ ತಮ್ಮ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸಿದರು. ಪ್ರಪಂಚದಲ್ಲಿ ಸಾಟಿ ಇಲ್ಲದ ಈ ಭಾಷೆ ಇಂದು ಕಂಪ್ಯೂಟರ್‌ನ ಮೂಲಕ ಸುಲಭವಾಗಿ ಸಂಪರ್ಕವನ್ನು ಸಂವಹನ ನಡೆಸಲು ಸಾಧ್ಯವಾಗುವ ಭಾಷೆ ಎಂದು ಜಗತ್ತಿನಲ್ಲಿಯೇ ಗುರುತಿಸಿಲ್ಪಟ್ಟಿದೆ.

ಆದರೆ, ಸಂಸ್ಕೃತವನ್ನು ಆಧ್ಯಾತ್ಮಿಕವನ್ನು ತೆಗಳುವುದೇ ಇಂದು ಬುದ್ಧಿವಂತಿಕೆಯ ಸಂಕೇತ ಎನ್ನಿಸಿದೆ. ಹೀಗಾಗಿ ಶೇಷ್ಠವಾದ ಆದರ್ಶಗಳನ್ನು, ಜೀವನ ಪದ್ಧತಿಯನ್ನು ಹೇಳಿಕೊಟ್ಟ ಸಂಸ್ಕೃತ ಭಾಷೆಯಾಗಲಿ, ರಾಮಾಯಣ ಭಾರತದಂತಹ ಕಾವ್ಯಗಳಾಗಲಿ, ಆಧ್ಯಾತ್ಮಿಕ ಬದುಕಾಗಲಿ ಭಾರತದಲ್ಲಿ ತೆಗಳಿಕೆಗೆ ವಸ್ತುವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ಟಿ.ವಿ.ವೆಂಕಟಾಚಲ ಶಾಸ್ತ್ರಿ ಹಾಗೂ ಬನ್ನಂಜೆ ಗೋವಿಂದಾಚಾರ್ಯ ಅವರಂತಹ ವಿದ್ವಾಂಸರಿಂದ ಕನ್ನಡ ನಾಡು ನುಡಿಗೆ ಶ್ರೀಮಂತಿಕೆ ಧನ್ಯತೆ ಬಂದಿದೆ ಎಂದರು. ಸನ್ಮಾನ ಸ್ವೀಕರಿಸಿದ ಮತ್ತೊಬ್ಬ ವಿದ್ವಾಂಸ ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಮಾತನಾಡಿದರು.

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣುಭಟ್ ಅಭಿನಂದನ ಭಾಷಣ ನಡೆಸಿದರು. ವೈ.ಅನಂತಪದ್ಮನಾಭ ಭಟ್ ಹಾಡಿದರು. ಸಾಹಿತ್ಯ ಸಂಘದ ಅಧ್ಯಕ್ಷ ಆರ್.ತುಕರಾಮ ನಾಯಕ್ ಸ್ವಾಗತಿಸಿದರು. ಸಂಚಾಲಕ ಪ್ರೊ.ಎಂ.ರಾಮಚಂದ್ರ ನಿರೂಪಿಸಿದರು.  ಬಿ.ಪದ್ಮನಾಭ ಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.