ಉಡುಪಿ: ‘ಭಾಷೆ– ಸಾಹಿತ್ಯ ನಮ್ಮ ಅಂತಃ ಸತ್ವದ ಬೆಳಕನ್ನು ಜಾಗೃತಗೊಳಿಸುವ ಮೂಲಕ ಸೃಜನಶೀಲತೆಯನ್ನು ಬೆಳಗುತ್ತದೆ’ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ಮಣಿಪಾಲ ವಿಶ್ವವಿದ್ಯಾಲಯದ ಡಾ. ಟಿ.ಎಂ.ಎ. ಪೈ ಭಾರತೀಯ ಸಾಹಿತ್ಯ ಪೀಠ ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಭಾಷಾ ಸೌಹಾರ್ದತಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಈ ಬೆಳಕಿನ ಹುಡುಕಾಟದ ಮೂಲಕ ಸಮಾಜದಲ್ಲಿ ಸಮಾನತೆಯ ಕನಸನ್ನು ನನಸು ಗೊಳಿಸಬೇಕು ಎಂದು ಹೇಳಿದ ಅವರು ಸಾಹಿತ್ಯ– ವಿಜ್ಞಾನ ಎರಡು ಬೇರೆ ಬೇರೆ ಯಲ್ಲ, ಅವು ಒಂದರೊಳಗೊಂದು ಸೇರಿ ಸಾಗಬೇಕೆಂದು ಹಲವು ಉದಾಹರಣೆ ಯ ಮೂಲಕ ವಿವರಿಸಿದರು. ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.
ಡಾ. ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠದ ಅಧ್ಯಕ್ಷೆ ಸಾಹಿತಿ ವೈದೇಹಿ ಪ್ರಾಸ್ತವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಸುಮ, ಪ್ರಜ್ಞ, ಚಂದನಾ, ನವ್ಯ ಅವರು ಕಾಯ್ಕಿಣಿ ಅವರ ಹಾಡು ಮತ್ತು ಸಾಹಿತ್ಯದ ಅಭಿವ್ಯಕ್ತಿಯನ್ನು ಪ್ರಸ್ತುತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಡಾ. ನಿಕೇತನ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ. ಪ್ರಸಾದ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಡಾ. ಎಚ್.ಕೆ. ವೆಂಕಟೇಶ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.