ADVERTISEMENT

ಮಂಜುನಾಥ ಭಾಗವತರ ಸಮಗ್ರ ಕಾವ್ಯ ಸಂಪುಟ ತನ್ನಿ

ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2015, 5:53 IST
Last Updated 16 ಫೆಬ್ರುವರಿ 2015, 5:53 IST
ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಅವರು ಹೊಸ್ತೋಟ ಮಂಜುನಾಥ ಭಾಗವತರನ್ನು ಸನ್ಮಾನಿಸಿದರು. ಇತಿಹಾಸ ತಜ್ಞ ಪ್ರೊ. ಷ.ಶೆಟ್ಟರ್‌, ಯಕ್ಷಗಾನ ಅರ್ಥದಾರಿ ಕುಂಬಳೆ ಸುಂದರ ರಾವ್‌, ಯಕ್ಷಗಾನ ವಿಮರ್ಶಕ ಡಾ.ಎಂ ಪ್ರಭಾಕರ ಜೋಶಿ, ಕರ್ನಾಟಕ ಯಕ್ಷಗಾನ ಆಕಾಡೆಮಿಯ ಮಾಜಿ ಆಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಇದ್ದಾರೆ. 	ಪ್ರಜಾವಾಣಿ ಚಿತ್ರ
ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಅವರು ಹೊಸ್ತೋಟ ಮಂಜುನಾಥ ಭಾಗವತರನ್ನು ಸನ್ಮಾನಿಸಿದರು. ಇತಿಹಾಸ ತಜ್ಞ ಪ್ರೊ. ಷ.ಶೆಟ್ಟರ್‌, ಯಕ್ಷಗಾನ ಅರ್ಥದಾರಿ ಕುಂಬಳೆ ಸುಂದರ ರಾವ್‌, ಯಕ್ಷಗಾನ ವಿಮರ್ಶಕ ಡಾ.ಎಂ ಪ್ರಭಾಕರ ಜೋಶಿ, ಕರ್ನಾಟಕ ಯಕ್ಷಗಾನ ಆಕಾಡೆಮಿಯ ಮಾಜಿ ಆಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಇದ್ದಾರೆ. ಪ್ರಜಾವಾಣಿ ಚಿತ್ರ   

ಉಡುಪಿ: ‘ಹೊಸ್ತೋಟ ಮಂಜುನಾಥ ಭಾಗವತರು ರಚಿಸಿರುವ 250 ಯಕ್ಷಗಾನ ಪ್ರಸಂಗಗಳನ್ನು ಸೇರಿಸಿ ಸಮಗ್ರ ಕಾವ್ಯ ಸಂಪುಟ ರಚಿಸಲು ಸರ್ಕಾರ ಮುಂದಾಗಬೇಕು’ ಎಂದು ಇತಿಹಾಸ ತಜ್ಞ ಪ್ರೊ. ಷ.ಶೆಟ್ಟರ್‌ ಒತ್ತಾಯಿಸಿದರು. 

ಶ್ರೀಕೃಷ್ಣ ಮಠ ಪರ್ಯಾಯ ಕಾಣಿಯೂರು ಮಠ, ಯಕ್ಷಗಾನ ಕಲಾರಂಗ ಉಡುಪಿ, ಬೆಂಗಳೂರಿನ ಅನೇಕ-ನಾರಾಯಣ ಜೋಷಿ ಚಾರಿಟೆಬಲ್ ಟ್ರಸ್ಟ್, ಬೆಳೆಯೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಇಂದ್ರಾಳಿ ಯಕ್ಷಗಾನ ಕೇಂದ್ರ ಸಂಯುಕ್ತವಾಗಿ ರಾಜಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರ-೭೫’ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರಡು, ಮೂರು ಕಾವ್ಯಗಳನ್ನು ಬರೆದವರು, ಕೇವಲ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡಿದವರು ರಾಷ್ಟ್ರಕವಿಗಳಾಗಲು ಹೊರಟಿದ್ದಾರೆ. ಆದರೆ, ದ್ವಿಪದಿ, ತ್ರಿಪದಿ ಮತ್ತು ಷಟ್ಪದಿಗಳನ್ನು ಬಳಸಿ ಇಷ್ಟೊಂದು ಪ್ರಸಂಗಗಳನ್ನು ರಚಿಸಿ ಎಲೆಮರೆ ಕಾಯಿಯಂತಿರುವ ಇಂತಹವರನ್ನು ಗುರುತಿಸಬೇಕಾಗಿದೆ ಎಂದರು.

ಅದ್ಭುತವಾದ ವ್ಯಕ್ತಿತ್ವ ಹೊಂದಿರುವ ಮಂಜುನಾಥ ಭಾಗವತರು ಪ್ರತಿ ಬಾರಿಯೂ ಒಂದು ತಿಂಗಳ ಮೌನವ್ರತದ ಸಮಯದಲ್ಲಿ ಒಂದೊಂದು ಪ್ರಸಂಗಗಳನ್ನು ರಚಿಸುವ ಮೂಲಕ ಆಸಾಧಾರಣ ಪಾಂಡಿತ್ಯ ಹೊಂದಿದ್ದಾರೆ. ಸರ್ಕಾರ ಇಂತಹವರನ್ನು ಗುರುತಿಸಬೇಕು. ಯಕ್ಷಗಾನ, ಜಾನಪದ ಆಕಾಡೆಮಿ ಮತ್ತು ವಿಶ್ವ ವಿದ್ಯಾಲಯಗಳು ಇಂತಹವರನ್ನು ಗುರುತಿಸಿ ಪದವಿ ನೀಡಿದಾಗ ಅದಕ್ಕೆ ಮೌಲ್ಯ ಬರುತ್ತದೆ ಎಂದರು. 

ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲೆಯನ್ನು ಊರಿಂದ ಊರಿಗೆ ಪ್ರಚುರ ಪಡಿಸಿ ಪ್ರಸಂಗ ರಚಿಸುವ ಮೂಲಕ ಮಂಜುನಾಥ ಭಾಗವತರು ಅವಧೂತರಾಗಿದ್ದಾರೆ ಎಂದರು.

ಮಂಜುನಾಥ ಭಾಗವತರ ಒಡಲಿನ ಮಡಿಲು–ಯಕ್ಷತಾರೆ, ಪವಾಡವಲ್ಲ ವಿಸ್ಮಯ ಹಾಗೂ ಜಿ.ಮಮತಾ ಅವರ ಅಂತರ್ಮುಖ ಕೃತಿಗಳನ್ನು ಯಕ್ಷಗಾನ ಅರ್ಥದಾರಿ ಕುಂಬಳೆ ಸುಂದರ ರಾವ್‌ ಬಿಡುಗಡೆ ಮಾಡಿದರು.

ಯಕ್ಷಗಾನ ವಿಮರ್ಶಕ ಡಾ.ಎಂ ಪ್ರಭಾಕರ ಜೋಶಿ, ಕರ್ನಾಟಕ ಯಕ್ಷಗಾನ ಆಕಾಡೆಮಿಯ ಮಾಜಿ ಆಧ್ಯಕ್ಷ ಪ್ರೊ. ಎಂ.ಎಲ್ ಸಾಮಗ, ಮಯೂರಿ ಉಪಾಧ್ಯಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಅನೇಕ- ಚಾರಿಟೆಬಲ್ ಟ್ರಸ್ಟ್‌ನ ಪ್ರಕಾಶ್ ಜೋಶಿ, ಬೆಳೆಯೂರು ಯಕ್ಷಗಾನ ಮಂಡಳಿಯ ಸಂಚಾಲಕ ಬಿ.ರಂಗನಾಥ,ಯಕ್ಷಗಾನ ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.