ಉಡುಪಿ: `ವೇದಗಳನ್ನು ಬರೆದವರೂ ಮಹಾಭಾರತವನ್ನು ಶ್ರೇಷ್ಠವಾದ ಗ್ರಂಥ ಎಂದು ಒಪ್ಪಿಕೊಂಡಿದ್ದಾರೆ. ಮಹಾಭಾರತವನ್ನು ವಿಭಿನ್ನವಾದ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ನಡೆಯಬೇಕು' ಎಂದು ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ ಹೇಳಿದರು.
ಉಡುಪಿಯ ಶ್ರೀ ವಾದಿರಾಜ ಅಧ್ಯಯನ ಕೇಂದ್ರ ಆಶ್ರಯದಲ್ಲಿ ರಥಬೀದಿಯ ಪುತ್ತಿಗೆ ಮಠದಲ್ಲಿ ಶುಕ್ರವಾರದಿಂದ ಆರಂಭವಾದ ಮೂರು ದಿನಗಳ `ಶ್ರೀ ಮಹಾಭಾರತಂ' ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಭಾರತ ಗ್ರಂಥವನ್ನು ಅಧ್ಯಯನ ಮೂಲಕ ಬೆಳಕು ಚೆಲ್ಲುವುದರಿಂದ ಭಗವಂತನನ್ನು ಶ್ರೇಷ್ಠವಾಗಿ ಆರಾಧಿಸಿದಂತೆ. ನಮ್ಮ ಪರಿಮಿತಿಯನ್ನು ತಿಳಿದುಕೊಂಡು ಮಹಾಭಾರತ ಗ್ರಂಥದ ಮೂಲಕ ಇನ್ನಷ್ಟು ಜ್ಞಾನವನ್ನು ಪಡೆಯಬಹುದು ಎಂದು ಅವರು ಹೇಳಿದರು.
`ಮಹಾಭಾರತ ಭಾರತೀಯ ಸಮಗ್ರ ಚಿಂತನೆಯ ಒಂದು ರೂಪ. ಯಾವುದೇ ವಿಶ್ವ ವಿದ್ಯಾಲಯಗಳು ಅಸ್ಥಿತ್ವಕ್ಕೆ ಬರಬೇಕಾದರೆ ಸಂಶೋಧನೆ ನಡೆಯಬೇಕು' ಎಂದು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ನಿರ್ದೇಶಕ ಡಾ.ಶ್ರೀನಿವಾಸ ವರಖೇದಿ ಹೇಳಿದರು.
ಸಂಸ್ಕೃತವನ್ನು ಭಾಷೆಯಾಗಿ ಮತ್ತು ವಿಜ್ಞಾನವಾಗಿ ಸಂಸ್ಕೃತ ವಿಶ್ವ ವಿದ್ಯಾಲಯದ ಮೂಲಕ ಅಧ್ಯನ ಮಾಡುವ ಕೆಲಸ ಆಗುತ್ತಿದೆ, ಅದಕ್ಕೆ ಪೂರಕವಾಗಿ ಉಡುಪಿಯ ವಾದಿರಾಜ ಸಂಶೋಧನ ಕೇಂದ್ರ ಕೆಲಸ ಮಾಡುತ್ತಿದೆ ಎಂದರು.ಶೃಂಗೇರಿಯ ರಾಜೀವ್ ಗಾಂಧಿ ಕೇಂದ್ರದ ಪ್ರಾಂಶುಪಾಲ ಡಾ.ಎನ್.ಆರ್. ಕಣ್ಣನ್ ಉಪಸ್ಥಿತರಿದ್ದರು. ಬಿ.ಗೋಪಾಲ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವೇದಾರ್ಥ ಚಿಂತನೆ ವಿಷಯದಲ್ಲಿ ಮೂರು ಗೋಷ್ಠಿಗಳು ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.